ADVERTISEMENT

ಬಾಡಿದ ಜೋಳದ ಬೆಳೆ: ಸಂಕಷ್ಟದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2013, 7:03 IST
Last Updated 12 ಜನವರಿ 2013, 7:03 IST
ಹಟ್ಟಿಗೆ ಸಮೀಪ ರೈತ ಬಾಡಿದ ಬಿಳಿ ಜೋಳದ ಬೆಳೆಯನ್ನು ನೋಡಿದರು
ಹಟ್ಟಿಗೆ ಸಮೀಪ ರೈತ ಬಾಡಿದ ಬಿಳಿ ಜೋಳದ ಬೆಳೆಯನ್ನು ನೋಡಿದರು   

ಹಟ್ಟಿ ಚಿನ್ನದ ಗಣಿ: ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ಒಂದಾದ ಬಿಳಿ ಜೋಳದ ಬೆಳೆ ಹಿಂಗಾರು ಮಳೆ ಇಲ್ಲದೆ ಬಾಡಿದ್ದು ರೈತರಿಗೆ ಗಾಯದ ಮೇಲೆ ಬರೆ ಇಟ್ಟಂತಾಗಿ ರೈತಾಪಿ ವರ್ಗಕ್ಕೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ.

ಬಿಳಿ ಜೋಳ ಹಿಂಗಾರು ಹಂಗಾಮಿನ ಬೆಳೆಗಳಲ್ಲಿ ಮುಖ್ಯ ಬೆಳೆ. ಹಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಹುತೇಕ ರೈತರು ಬಿಳಿ ಜೋಳ ಹೆಚ್ಚು ಬೆಳೆಯುತ್ತಾರೆ. ಮುಂಗಾರು ಕೈಕೊಟ್ಟರೂ ಪರವಾಗಿಲ್ಲ. ನಮ್ಮನ್ನು ಕಷ್ಟಕಾಲದಲ್ಲಿ ಕೈಹಿಡಿಯುವ ಬೆಳೆ ಇದಾಗಿದೆ. ಮುಂಗಾರು ಮಳೆ ಬರದಿದ್ದರೂ ರೈತರು ಉಪಜೀವನಕ್ಕೆ ಬೇಕಾಗುವಷ್ಟು ಆದಾಯವಾದರೂ ಬರುತ್ತಿತ್ತು. ಆದರೆ ಈ ವರ್ಷ ಸಂಪೂರ್ಣ ಒಣಗಿದೆ.

ಈ ವರ್ಷ ಮಳೆ ಸರಿಯಾಗಿ ಆಗದ ಕಾರಣ ಚಳಿ ಮತ್ತು ಇಬ್ಬನಿ ಸರಿಯಾಗಿ ಬೀಳದ ಪರಿಣಾಮ ಬೆಳೆ ಸಂಪೂರ್ಣ ಬಾಡಿದೆ. ಇಳುವರಿ ಶೂನ್ಯ, 3 ಎಕರೆ ಕಪ್ಪು ಜಮೀನಿನಲ್ಲಿ 5 ಸಾವಿರ ರೂಪಾಯಿ ಸಾಲ ಪಡೆದು ಖರ್ಚುಮಾಡಿ ಬಿತ್ತನೆ ಮಾಡಿದ್ದಾನೆ. ಈಗ ತೆನೆ ಬಿಟ್ಟಿವೆ ಆದರೆ ಕಾಳು ಕಟ್ಟಿಲ್ಲ. ಇಳುವರಿ ಏನೂ ಬರುವುದಿಲ್ಲ. ಕೇವಲ 1 ಸಾವಿರ ರೂಪಾಯಿ ಮೇವು ಸಿಗುತ್ತದೆ. ಉಳಿದ  4 ಸಾವಿರ ಹೇಗೆ ಮರುಪಾವತಿ ಮಾಡಬೇಕು. ನನ್ನ ಕುಟುಂಬ ಉಪಜೀವನ ಹೇಗೆ ನಡೆಸಬೇಕು ಎಂದು ಗೌಡೂರು ತಾಂಡದ ರೈತ ಪುಲ್ಲಪ್ಪ ಹೇಳುತ್ತಾರೆ. ಬಹಳಷ್ಟು ರೈತರ ಪರಿಸ್ಥಿತಿ ಇದೇ ರೀತಿಯಾಗಿದೆ. ಶೇ 20ರಷ್ಟು ರೈತರು ಬ್ಯಾಂಕ್‌ಗಳಲ್ಲಿ ಸಾಲ ಪಡೆದುಕೊಂಡಿದ್ದಾರೆ.

ಇನ್ನುಳಿದ ಶೇ 80 ರಷ್ಟು ಸಣ್ಣರೈತರು ಕೈಗಡ ಸಾಲ ಪಡೆದುಕೊಂಡು ಬಿತ್ತನೆ ಮಾಡಿದ್ದಾರೆ. ಸರ್ಕಾರ ಸಾಲ ಮನ್ನ ಮಾಡಿದರೂ ಕೆಲವಷ್ಟೆ ರೈತರಿಗೆ ಮಾತ್ರ ಲಾಭವಾಗುತ್ತದೆ ಎಂದು ಅಮರುಗುಂಪ್ಪ ದಿವಾನ, ಶರಣಪ್ಪ ಅಂಗಡಿ ಹೇಳುತ್ತಾರೆ.
ನಾರಾಯಣ ಪುರ ಬಲದಂಡೆ ಕಾಲುವಯಿಂದ ಅಲ್ಪ ಸ್ವಲ್ಪ ನೀರಾವರಿ ಇದ್ದರೂ ಸಕಾಲಕ್ಕೆ ನೀರು ಬಿಡದ ಕಾರಣ ಬೆಳೆ ಒಣಗಿ ಹೋಗಿವೆ ಸಂಬಂಧಿಸಿದ ನೀರಾವರಿ ಇಲಾಖೆಗೆ ಹೇಳಿದರೂ ಏನು ಪ್ರಯೋಜನವಾಗಿಲ್ಲ ಎಂದು ರೈತ ಸಾಹೇಬಗೌಡ ದೂರುತ್ತಾರೆ.

ಕೃಷಿ ಸಹಾಯಕರು ಗ್ರಾಮಗಳಿಗೆ ಭೇಟಿ ನೀಡದೆ ರೈತರಿಗೆ ನೀಡಬೇಕಾದ ಮಾಹಿತಿ ನೀಡುತ್ತಿಲ್ಲ. ಕೃಷಿ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿ ಮಾಡಿದ ಬೀಜ, ಗೊಬ್ಬರ ರಸೀದಿ ನೀಡುತ್ತಿಲ್ಲ ಎಂದು ರೈತರು ಆರೋಪಿಸುತ್ತಾರೆ. ಬಿಳಿ ಜೋಳದ ಬೆಲೆ ಗಗನಕ್ಕೆ ಏರಿದೆ. ರೈತರಿಗೆ ಪರಿಹಾರ ನೀಡಿ ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಮುಂದಾಬೇಕೆಂದು  ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.