ADVERTISEMENT

ಬುದ್ದಿನ್ನಿ ಕೆರೆ: ಪೋಲಾಗುತ್ತಿರುವ ನೀರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 6:05 IST
Last Updated 10 ಅಕ್ಟೋಬರ್ 2012, 6:05 IST

ಲಿಂಗಸುಗೂರ(ಮುದಗಲ್ಲ): ಕಳೆದ ಏಳೆಂಟು ವರ್ಷಗಳ ಹಿಂದೆ ನೀರಾವರಿ ಸೌಲಭ್ಯದ ಉದ್ದೇಶದಿಂದ ಗ್ರಾಮಸ್ಥರ ವಿರೋಧದ ಮಧ್ಯೆಯು ಕೋಟ್ಯಂತರ ಹಣ ಖರ್ಚು ಮಾಡಿ ತಾಲ್ಲೂಕಿನ ಬುದ್ದಿನ್ನಿ ಗ್ರಾಮಕ್ಕೆ ಹೊಂದಿಕೊಂಡು ಕೆರೆ ನಿರ್ಮಿಸಲಾಯಿತು.

ಅಂದಿನಿಂದ ಇಂದಿನವರೆಗೆ ಹನಿ ನೀರು ನೀರಾವರಿಗೆ ಬಳಕೆ ಆಗದೆ ಹೋಗಿರುವುದು ಸೋಜಿಗ. ಕಳೆದ ವರ್ಷದಿಂದ ಕೆರೆಯ ತೂಬಿನಿಂದ ನೀರು ವ್ಯರ್ಥ ಪೋಲಾಗುತ್ತಿದ್ದರು ಕೂಡ ಇಲಾಖೆ ಮೌನಕ್ಕೆ ಶರಣಾಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ತು ಹಲವು ಸಮಸ್ಯೆಗಳ ಮಧ್ಯೆ ಗುತ್ತಿಗೆದಾರರ ಹಿತಾಸಕ್ತಿಗೆ ಅನುಗುಣವಾಗಿ ಕೆರೆ ನಿರ್ಮಿಸಲಾಗಿದೆ. ಸಂಗ್ರಹಗೊಳ್ಳುವ ಕೆರೆ ನೀರಿನಿಂದ ಕೆಳಭಾಗದ 150 ರಿಂದ 200 ಎಕರೆ ಪ್ರದೇಶಕ್ಕೆ ನೀರು ಹರಿಸುವ ನಾಲೆಗಳು ನಿರ್ಮಾಣಗೊಳ್ಳಲಿಲ್ಲ.

ಕಳಪೆ ಕಾಮಗಾರಿ ಎಂಬ ಆರೋಪ ಹೊತ್ತಿರುವ ಕೆರೆ ತುಂಬುತ್ತಿದ್ದಂತೆ ತೂಬಿನ ಕ್ರೆಸ್ಟ್‌ಗೇಟ್ ಎತ್ತಿ ನೀರು ಹೊರಬಿಡುತ್ತ ಬರಲಾಗಿದೆ. ಕಳೆದ ಮೂರು ವರ್ಷಗಳಿಂದ ಮಳೆಯ ಅಭಾವದಿಂದ ಕೆರೆ ಬಣಗುಟ್ಟುತ್ತಿದೆ. ಕೆರೆ ನಿರ್ವಹಣೆ ಹೆಸರಿನಲ್ಲಿ ಪ್ರತಿ ವರ್ಷ ಲಕ್ಷಾಂತರ ಹಣ ಖರ್ಚು ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದವು.

ಕೆರೆ ನೀರು ಸಂಗ್ರಹಗೊಳಿಸಲು ಆರಂಭಗೊಂಡ ದಿನದಿಂದೆ ತೂಬಿನ ಗೋಡೆ ಕುಸಿತ ಕಾಣಿಸಿಕೊಂಡಿತ್ತು. ಗೋಡೆ ಕುಸಿತದ ನೆಪದಿಂದ ಇಂದಿಗೂ ಪರಿಪೂರ್ಣವಾಗಿ ಕೆರೆ ತುಂಬುತ್ತಿಲ್ಲ. ಕೆಲವೆ ಜನರ ಹಿತದೃಷ್ಟಿ ಇಟ್ಟುಕೊಂಡು ಇಂತಹ ಸಮಸ್ಯೆ ಎದುರಿಸುವಂತಾಗಿದೆ.
 
ಕುಸಿದಿರುವ ಗೋಡೆಯ ಮಧ್ಯ ಭಾಗದಿಂದ ಹಾಗೂ ಬಳಕೆಯಾಗದ ಕ್ರೆಸ್ಟ್‌ಗೇಟ್ ಮುರಿದು ಸಂಗ್ರಹಗೊಳ್ಳುವ ನೀರು ವ್ಯರ್ಥ ಹರಿದು ಹೋಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನ ಸೆಳೆದರು ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಆರೋಪಿಸಿದರು.

ಕೆರೆ ನಿರ್ವಹಣೆ ಹೆಸರಿನಲ್ಲಿ ಪ್ರತಿ ವರ್ಷ ಲಕ್ಷಾಂತರ ಹಣ ಖರ್ಚು ಹಾಕಲಾಗುತ್ತಿದೆ. ಆದಾಗ್ಯೂ ಕೂಡ ಕೆರೆಯ ಮಣ್ಣಿನ ಏರಿನ ಮೇಲೆ ಮುಳ್ಳುಕಂಟಿಗಳು ಬೆಳೆದು ಮತ್ತಷ್ಟು ಅಭದ್ರತೆ ತಲೆದೋರಿದೆ. ಕೆರೆ ನಿರ್ಮಾಣ ಸಂದರ್ಭದಲ್ಲಿ ರೈತರು ಬೇಡ ಅಂದರು ನಿರ್ಮಿಸಿದ ಕೆರೆ ನಿರ್ವಹಣೆ ಮತ್ತು ಮೇಲುಸ್ತುವಾರಿ ವಹಿಸುವಲ್ಲಿ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ.

ಬರಗಾಲದಲ್ಲಿ ನೀರು ದೊರಕುತ್ತಿಲ್ಲ ಎಂದು ಪರದಾಡುವಾಗ ಸೋರಿಕೆಯಿಂದ ವ್ಯರ್ಥ ನೀರು ಪೋಲಾಗುವುದನ್ನು ತಡೆಯುವಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ವಹಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.