ADVERTISEMENT

ಮಸ್ಕಿ: ಸರ್ಕಾರಿ ಆಸ್ಪತ್ರೆಗೆ ಸಿಬ್ಬಂದಿ ಚಿಂತೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 10:54 IST
Last Updated 3 ಡಿಸೆಂಬರ್ 2013, 10:54 IST

ಮಸ್ಕಿ: ಮಸ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಬರುವ ರೋಗಿಗಳಿಗೆ ಉತ್ತಮ ಸೇವೆ ನೀಡಲು ಆಗುತ್ತಿಲ್ಲ. ವೈದ್ಯರ ಕೊರತೆ ಆಸ್ಪತ್ರೆಯಲ್ಲಿ ಎದ್ದುಕಾಣುತ್ತದೆ.  ಈ ಭಾಗದ ಸುಮಾರು 50 ಕ್ಕೂ ಹೆಚ್ಚು ಹಳ್ಳಿ ಜನರಿಗೆ ಅನುಕೂಲವಾಗುವ ಇಲ್ಲಿನ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ಸರ್ಕಾರಕ್ಕೆ ಸಲ್ಲಿಸಿ ಹಲವು ವರ್ಷಗಳೇ ಕಳೆದಿದೆ. ಈ ಪ್ರಸ್ತಾಪ ಸರ್ಕಾರದ ಕಡತದಲ್ಲಿ ಹಾಗೇ ಉಳಿದು ಬಿಟ್ಟಿದೆ.

ಆದರೆ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಗೆ ಬರುವ ರೋಗಿಗಳು ಸರಿಯಾದ ಚಿಕಿತ್ಸೆ ಸಿಗದೆ ಪರದಾಡಬೇಕಾದ ದು:ಸ್ಥಿತಿ ಬಂದಿದೆ. ಚಿಕಿತ್ಸೆಗೆ ಬರುವ ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಕಾರಣದಿಂದ ಖಾಸಗಿ ಆಸ್ಪತ್ರಯತ್ತ ಮುಖ ಮಾಡುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು, ಒಬ್ಬರು ಹಿರಿಯ ಸಹಾಯಕರು, ಮೂರು ಜನ ಕಿರಿಯ ಸಹಾಯಕರು, ಎರಡು ಜನ ‘ಡಿ’ ದರ್ಜೆಯ ನೌಕರರು, ಒಬ್ಬರು ಚಾಲಕರು, ಒಬ್ಬ ಸಹಾಯಕ, ಒಬ್ಬ ಪ್ರಯೋಗಲಾಯ ಸಿಬ್ಬಂದಿ ಸೇರಿ ಒಟ್ಟು 11 ಜನರ ಸೇವೆಯಲ್ಲಿರಬೇಕಿತ್ತು. ಆದರೆ, ಇಲ್ಲಿ ಒಬ್ಬರೇ ವ್ಯದ್ಯರಿದ್ದಾರೆ. ಒಬ್ಬ ‘ಡಿ’ ದರ್ಜೆಯ ನೌಕರ ಮಾತ್ರ ಇದ್ದಾರೆ. ಇಡೀ ಆಸ್ಪತ್ರ ಉಸ್ತುವಾರಿ ನೋಡಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ಉಳಿದ 9 ಹುದ್ದೆಗಳ ಖಾಲಿ ಇವೆ. ಸರ್ಕಾರ ಯಾವಾಗ ಉಳಿದ ಸಿಬ್ಬಂದಿ ನೇಮಕ ಮಾಡುತ್ತದೆ ಎಂಬ ಅಳಲು ಈ ಭಾಗದ ಜನರದಾಗಿದೆ.

ಮಸ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ 9 ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶವಿದೆ.  ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371 ಕಲಂ ತಿದ್ದುಪಡಿ ಜಾರಿಯಾಗಿದ್ದರಿಂದ ನೇಮಕಾತಿಗೆ ಯಾವುದೇ ತೊಂದರೆ ಇಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮೂಲಕ ಹಾಗೂ ಸ್ಥಳೀಯ ಶಾಸಕರ ಜೊತೆ ಚರ್ಚಿಸಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಸ್ಕಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಬಿ. ಮುರಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.