ADVERTISEMENT

ಮಾನ್ವಿ ತಾಪಂ ಕಾಂಗ್ರೆಸ್ ಮಡಿಲಿಗೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:20 IST
Last Updated 9 ಅಕ್ಟೋಬರ್ 2012, 9:20 IST

ಮಾನ್ವಿ: ತಾಲ್ಲೂಕು ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪಾರ್ವತಿ ಗುರುರಾಜ ಚಂದ್ರೆಡ್ಡಿ ಅಧ್ಯಕ್ಷೆಯಾಗಿ ಮತ್ತು ರಾಜಾ ವಸಂತ ನಾಯಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತಾಲ್ಲೂಕು ಪಂಚಾಯಿತಿಯಲ್ಲಿ 15ಸದಸ್ಯರ ಬಹುಮತ ಹೊಂದಿದ್ದ ಬಿಜೆಪಿಯ ಇಬ್ಬರು ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕೈ ಎತ್ತುವ ಮೂಲಕ ಬಿಜೆಪಿ ಪಕ್ಷದಲ್ಲಿನ ಭಿನ್ನಮತಕ್ಕೆ ಸಾಕ್ಷಿಯಾದರು. ಬಿಜೆಪಿ ಸದಸ್ಯರಾದ ಕವಿತಾಳ ಕ್ಷೇತ್ರದ ಕರಿಯಪ್ಪ ಅಡ್ಡೆ ಹಾಗೂ ಕವಿತಾಳ-2 ಕ್ಷೇತ್ರದ ಸದಸ್ಯ ಕರಿಯಪ್ಪ ತೋಳ ಅವರನ್ನು ಅಪಹರಣ ಮಾಡಲಾಗಿದೆ  ಎಂದು ಬಿಜೆಪಿ ಮುಖಂಡರು ಕವಿತಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ ಚುನಾವಣೆ ಕುತೂಹಲ ಕೆರಳಿಸಿತ್ತು.

ಆದರೆ ಈ ಇಬ್ಬರು ಬಿಜೆಪಿ ಸದಸ್ಯರು ಸೋಮವಾರ ಕಾಂಗ್ರೆಸ್ ಬೆಂಬಲಿತರೊಂದಿಗೆ ತಾಲ್ಲೂಕು ಪಂಚಾಯಿತಿ ಕಚೇರಿಗೆ ಆಗಮಿಸುವ ಮೂಲಕ ಅದುವರೆಗೂ ಹರಡಿದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಬಾಗಲವಾಡ ಕ್ಷೇತ್ರದ ಪಾರ್ವತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಜಾನೇಕಲ್ ಕ್ಷೇತ್ರದ ರಾಜಾ ವಸಂತ ನಾಯಕ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಪೋತ್ನಾಳ ಕ್ಷೇತ್ರದ ವಿಜಯಲಕ್ಷ್ಮೀ ನಾಡಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಪಗಲ್ ಕ್ಷೇತ್ರದ ನರಸಮ್ಮ ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ 16 ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿಗಳ ಪರವಾಗಿ 13ಸದಸ್ಯರು ಮತ ಚಲಾಯಿಸಿದರು. ಜೆಡಿಎಸ್ ಪಕ್ಷದ ಓರ್ವ ಸದಸ್ಯೆ ಕೂಡ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದರು. ಅಂತಿಮವಾಗಿ ಚುನಾವಣಾಧಿಕಾರಿಯಾಗಿದ್ದ ಸಹಾಯಕ ಆಯುಕ್ತೆ ಮಂಜುಶ್ರೀ ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಪಾರ್ವತಿ ಗುರುರಾಜ ಚಂದ್ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ರಾಜಾ ವಸಂತ ನಾಯಕ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷೆ ಪಾರ್ವತಿ ಹಾಗೂ  ಉಪಾಧ್ಯಕ್ಷ ರಾಜಾ ವಸಂತ ನಾಯಕ, ತಾಲ್ಲೂಕಿನ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಎಲ್ಲಾ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಷರತ್ತು ಇಲ್ಲ:  ಕಾಂಗ್ರೆಸ್ ಪರವಾಗಿ ಮತಚಲಾಯಿಸಿದ ಬಿಜೆಪಿ ಸದಸ್ಯರಾದ ಕರಿಯಪ್ಪ ಅಡ್ಡೆ ಹಾಗೂ ಕರಿಯಪ್ಪ ತೋಳ ಅವರು ಪತ್ರಕರ್ತರೊಂದಿಗೆ ಮಾತನಾಡಿ, ತಾವು ಯಾರಿಂದಲೂ ಅಪಹರಣಗೊಂಡಿಲ್ಲ. ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯವಿಲ್ಲ.

ತಾವು ಹಿಂದುಳಿದ ವರ್ಗಗಳಿಗೆ ಸೇರಿದ್ದರೂ ಕೂಡ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ  ಕ್ಷೇತ್ರದಿಂದ ಚುನಾಯಿತರಾಗಿದ್ದು ಬಿಜೆಪಿ ಮುಖಂಡರು ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸಲಿಲ್ಲ. ಸೂಕ್ತ ಸ್ಥಾನಮಾನ ನೀಡಲಿಲ್ಲ. ಕಾರಣ ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಚಲಾಯಿಸಿದ್ದು, ಸದಸ್ಯತ್ವದಿಂದ ಅನರ್ಹರಾದರೂ ತಲೆಕೆಡಿಸಿಕೊಳ್ಳುವುದಿಲ್ಲ. ಯಾವುದೇ ಕಾನೂನು ಹೋರಾಟ ನಡೆಸದೆ ಸಾಮಾನ್ಯ ವ್ಯಕ್ತಿಗಳಾಗಿ ಜನಸೇವೆ ಮಾಡುವುದಾಗಿ ಸ್ಪಷ್ಪಪಡಿಸಿದರು.

ಬಿಜೆಪಿ ಪ್ರತಿಭಟನೆ: ಅಪಹರಣಕ್ಕೊಳಗಾದ ಇಬ್ಬರು ಬಿಜೆಪಿ ಸದಸ್ಯರಿದ್ದ ಜೀಪನ್ನು ಚುನಾವಣೆ ನಡೆಯುವ ತಾಲ್ಲೂಕು ಪಂಚಾಯಿತಿ ಸಭಾಂಗಣದ ಕಡೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಪೊಲೀಸರ ಕ್ರಮ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.

ಪೊಲೀಸರ ಕ್ರಮ ವಿರೋಧಿಸಿ ಮಾಜಿ ಶಾಸಕ ಗಂಗಾಧರ ನಾಯಕ, ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ, ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಜೆ.ಶರಣಪ್ಪಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಕ್ಕುಂದಿ ಮಲ್ಲನಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ ಸಜ್ಜನ್ ಮತ್ತಿತರರು ಕಾರ್ಯಕರ್ತರೊಂದಿಗೆ ಕೆಲಹೊತ್ತು ತಾಲ್ಲೂಕು ಪಂಚಾಯಿತಿ ಸಭಾಂಗಣದ ಪ್ರವೇಶ ದ್ವಾರದ ಮುಂಭಾಗದಲ್ಲಿ  ಧರಣಿ ನಡೆಸಿದರು. ಕಾಂಗ್ರೆಸ್ ಹಾಗೂ ಬಿಜೆಪಿಯ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು.

ಕೂಡಲೇ ತಾಲ್ಲೂಕು ಪಂಚಾಯಿತಿ ಕಚೇರಿ ಹತ್ತಿರ 144ಕಲಂ ಅನ್ವಯ ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ಕ್ರಮ ಕೈಗೊಳ್ಳಲಾಯಿತು. ಡಿವೈಎಸ್‌ಪಿ ವೀರೇಶ ಬೆಳವಡಿ, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ದೊಡ್ಡಿ, ಸಬ್ ಇನ್ಸ್‌ಪೆಕ್ಟರ್ ದೀಪಕ್ ಬೂಸರೆಡ್ಡಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. 

ಪಿತೂರಿ: ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಗಂಗಾಧರ ನಾಯಕ, ತಾಲ್ಲೂಕು ಪಂಚಾಯಿತಿಯಲ್ಲಿ ಬಹುಮತ ಹೊಂದಿದ್ದರೂ ಬಿಜೆಪಿ ಅಧಿಕಾರ ಪಡೆಯುವಲ್ಲಿ ವಿಫಲವಾಗಲು ಬಿಜೆಪಿಯ ಮಾಜಿ ತಾಲ್ಲೂಕು ಅಧ್ಯಕ್ಷ ಶೇಷರೆಡ್ಡಿ ಅವರ ಪಿತೂರಿಯೇ ಮೂಲ ಕಾರಣ.

ಇಬ್ಬರು ಬಿಜೆಪಿ ಸದಸ್ಯರು ಕಾಂಗ್ರೆಸ್ ಪರವಾಗಿ ಮತಚಲಾಯಿಸುವಲ್ಲಿ ಶೇಷರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಪಕ್ಷದ ಚಿಹ್ನೆಯಿಂದ ಆಯ್ಕೆಯಾದ ಇಬ್ಬರು ಸದಸ್ಯರು ಹಣದಾಸೆಗಾಗಿ ಕಾಂಗ್ರೆಸ್‌ಗೆ ಮತಚಲಾಯಿಸಿ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ತಾಕತ್ತಿದ್ದರೆ ಈ ಇಬ್ಬರು ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷದಿಂದ ಪುನಃ ಸ್ಪರ್ಧಿಸಿ ಗೆಲವು ಸಾಧಿಸಲಿ ಎಂದು ಅವರು ಸವಾಲು ಹಾಕಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.