ADVERTISEMENT

ಮಾನ್ವಿ: ಮಂದಿರ, ದರ್ಗಾ ವಿವಾದಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 10:35 IST
Last Updated 5 ಏಪ್ರಿಲ್ 2012, 10:35 IST

ಮಾನ್ವಿ: ಪಟ್ಟಣದ ಬಾಬಾನಾಯ್ಕ ಕಾಲೋನಿಯಲ್ಲಿ ಪುರಸಭೆಗೆ ಸೇರಿದ ಸ್ಥಳದಲ್ಲಿದ್ದ  ಹನುಮಾನ ಮಂದಿರ ಮತ್ತು ದರ್ಗಾ ಕಟ್ಟೆಗೆ ಸಂಬಂಧಿಸಿದಂತೆ ಉದ್ಭವಿಸಿದ್ದ ವಿವಾದಕ್ಕೆ ಬುಧವಾರ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಶಾಂತಿಸಭೆಯಲ್ಲಿ ತೆರೆ  ಎಳೆಯಲಾಯಿತು.

ಪುರಸಭೆಯ ಉದ್ಯಾನ ಜಾಗೆಯಲ್ಲಿ ಹನುಮಾನ ಮಂದಿರ ಹಾಗೂ ದರ್ಗಾ ಕಟ್ಟೆ ಇದ್ದು, ಈಚೆಗೆ ಮಂದಿರದ ಅಭಿವೃದ್ಧಿಗೆ ಮುಂದಾದದ್ದು ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಟ್ಟೆ ಹಾಗೂ ಮಂದಿರ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಮಂಗಳವಾರ ಈ ಕುರಿತು ಸಭೆ ನಡೆಸಿದ್ದ ಜಿಲ್ಲಾಧಿಕಾರಿ  ಮಂದಿರ, ದರ್ಗಾ ಕಟ್ಟೆ ತೆರವುಗೊಳಿಸಲು ಸೂಚಿಸಿದ್ದರು.

ಬುಧವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಕಲ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಎ.ಬಿ.ಉಪ್ಪಳಮಠ ಮತ್ತಿತರರು ಪಟ್ಟಣದ ಜನತೆ ಶಾಂತಿ, ಸೌಹಾರ್ದತೆಗೆ ಹೆಸರಾಗಿದ್ದು ಈ ಹಿನ್ನೆಲೆಯಲ್ಲಿ   ವಿವಾದವನ್ನು ಸೌಹಾರ್ದಯುತವಾಗಿ ಬಗರೆಹರಿಸುವಂತೆ ಕೋರಿದರು.

ತಹಸೀಲ್ದಾರ್ ಎಂ.ಗಂಗಪ್ಪ ಕಲ್ಲೂರು ಮಾತನಾಡಿ,  ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಂದಿರ, ಮಸೀದಿ ಹಾಗೂ ಚರ್ಚ್‌ಗಳ ನಿರ್ಮಾಣಕ್ಕೆ ಅವಕಾಶ ಇಲ್ಲ. ಕಾರಣ ಪುರಸಭೆ ಜಾಗದಲ್ಲಿರುವ  ದರ್ಗಾ ಕಟ್ಟೆ ಹಾಗೂ ಮಂದಿರಗಳ ತೆರವು ಅಗತ್ಯ. ಹನುಮಾನ ಜಯಂತಿಗೆ ಎರಡು ದಿನಗಳು ಬಾಕಿ ಇರುವುದರಿಂದ   ಜನರ ಭಾವನೆಗಳಿಗೆ ಧಕ್ಕೆಯಾಗಬಾರದು. ಕಾರಣ ತೆರವಿಗೆ ಏಪ್ರಿಲ್ 8ರ  ಗಡುವು ನೀಡಲಾಗುವುದು. ಸ್ವಇಚ್ಛೆಯಂತೆ  ಎರಡು ಸಮುದಾಯದವರು ತೆರವು ಕೈಗೊಳ್ಳದಿದ್ದರೆ  ಏಪ್ರಿಲ್ 8ರ ನಂತರ   ತಾಲ್ಲೂಕು ಆಡಳಿತದ ವತಿಯಿಂದ ಹನುಮಾನ ಮಂದಿರ ಹಾಗೂ ದರ್ಗಾ ಕಟ್ಟೆಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ಮಾತನಾಡಿ, ಎರಡು ಸಮುದಾಯದವರು ಪ್ರತ್ಯೇಕವಾಗಿ ಮನವಿ ಸಲ್ಲಿಸಿದರೆ ಪುರಸಭೆ ವತಿಯಿಂದ ದರ್ಗಾ ಹಾಗೂ ಮಂದಿರ ನಿರ್ಮಾಣಕ್ಕೆ ನಿವೇಶನಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ ದೊಡ್ಡಿ, ಸಬ್ ಇನ್ಸ್ ಪೆಕ್ಟರ್ ದೀಪಕ್ ಭೂಸರೆಡ್ಡಿ, ಅಂಬಣ್ಣ, ವಿಶ್ವನಾಥ ವಕೀಲ, ಅರುಣ ಚಂದಾ, ಖಾಲೀದ್ ಖಾದ್ರಿ, ಸಜ್ಜಾದ್ ಹುಸೇನ ಮತವಾಲೆ, ಮಹಿಮೂದ, ದುರ್ಗೇಶ ನೀರಮಾನ್ವಿ, ಶರಣಯ್ಯ ಸ್ವಾಮಿ, ಮಹಿಮೂದ್ ಮತ್ತಿರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.