ADVERTISEMENT

ಮಾಯಾಲೋಕದಲ್ಲೊಂದು ಸುತ್ತು...

ರಾಮರಡ್ಡಿ ಅಳವಂಡಿ
Published 10 ಅಕ್ಟೋಬರ್ 2011, 10:05 IST
Last Updated 10 ಅಕ್ಟೋಬರ್ 2011, 10:05 IST

ರಾಯಚೂರು: ಒಂದು ಬಾರಿ ಚಪ್ಪಾಳೆ ತಟ್ಟಿದರೆ ಸುಂದರ ಪಾರಿವಾಳಗಳು ಹಾರಿ ಬಂದು ಕೈಯಲ್ಲಿ ಕೂರುತ್ತವೆ... ಪಟ ಪಟ ರೆಕ್ಕೆಪುಕ್ಕ ಅರಳಿಸಿ ಮತ್ತೆ ಹಾರಲು ಸಜ್ಜಾಗುತ್ತವೆ...

ವೇದಿಕೆ ಮೇಲೆ ನಿಂತ ಹುಡುಗಿಯೊಬ್ಬಳು ನೋಡು ನೋಡುತ್ತಿದ್ದಂತೆಯೇ ಗಾಳಿಯಲ್ಲಿ ತೇಲುತ್ತಾ ಮಲಗುತ್ತಾಳೆ... ಒಂದು ಕ್ಷಣ ಬಿಟ್ಟು ನೋಡಿದರೆ ಮತ್ತೊಂದು ದೃಶ್ಯ. ಮಲಗಿದ ಯುವಕನ ರುಂಡ ಒಂದು ಕಡೆ; ಮುಂಡ ಒಂದು ಕಡೆ ಆಗಿಬಿಡುತ್ತದೆ!

ಡಬ್ಬಿಯೊಳಗೆ ಸರಳವಾಗಿ ಹೋಗಿ ನಿಂತ ಹುಡುಗಿಯ ಕೈ ಒಂದು ಕಡೆ, ಕಾಲೊಂದು ಕಡೆ.. ತಲೆಯೊಂದು ಕಡೆ... ಮುಂಡವೇ ಮಾಯ! ಅಬ್ಬಾ ಇದೇನಪ್ಪಾ ಇದು ಎಂದು ಕಣ್ಣರಳಿಸಿ ನೋಡಿದರೆ ಕೆಳಗೆ ರುಂಡ ಮತ್ತು ಕಾಲುಗಳು! ಮೇಲ್ಗಡೆ ಕೈಗಳು ಹೊಯ್ದಾಡುತ್ತಿರುತ್ತವೆ!

ಇದು ಯಾವುದೋ ಭೂತ, ಭಯಾನಕ ಚಲನಚಿತ್ರದ ದೃಶ್ಯಗಳಲ್ಲೂ ಅಲ್ಲ... ಕಥೆಯೂ ಅಲ್ಲ. ಒಂದಿಷ್ಟು ಸಮಯ ಮಾಡಿಕೊಂಡು ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರಕ್ಕೆ ಧಾವಿಸಿದರೆ ಎರಡು ತಾಸು ಇಂಥ ಹಲವಾರು ದೃಶ್ಯಗಳು ನಿಮ್ಮ ಕಣ್ಮುಂದೆ ಹಾಯ್ದು ಹೋಗುತ್ತವೆ. ಮೈ ಜುಂ..! ಎನ್ನುತ್ತದೆ. ಕುತೂಹಲ ಸುಮ್ಮನೆ ಕೂರಿಸುವುದಿಲ್ಲ... ನಿಮಗರಿವಿಲ್ಲದೇ ನಿಮ್ಮ ಮಿದುಳು ಪತ್ತೇದಾರಿ ಕೆಲಸ ಮಾಡುತ್ತಿರುತ್ತದೆ. ಕಣ್ಣುಗಳು ಮಾಯಾಲೋಕದಲ್ಲಿ ವಿಹರಿಸುತ್ತಿರುತ್ತವೆ.

ಒಂದು ವಾರದಿಂದ ನಗರದಲ್ಲಿ `ಜಾದೂ ಪ್ರದರ್ಶನ~ ಆಯೋಜಿಸಿರುವ ವಿಶ್ವವಿಖ್ಯಾತ ಪ್ರಸಿದ್ಧ ಜಾದೂಗಾರ ಆನಂದ ಜಾದೂಗಾರ ಅವರ ಜಾದೂ ಪ್ರದರ್ಶನದ ದೃಶ್ಯ ಹಾಗೂ ವೀಕ್ಷಣೆ ಮಾಡಿದ ಪ್ರೇಕ್ಷಕರ ಅನುಭವದ ನುಡಿಗಳಿವು.

ಆರು ವರ್ಷಗಳ ಬಳಿಕ ಮತ್ತೆ ರಾಯಚೂರಿಗೆ ತಮ್ಮ ವಿಶಿಷ್ಟ ಕಲೆ ಜಾದೂ ಕಲೆ ಪ್ರದರ್ಶನಕ್ಕೆ 59 ವರ್ಷದ ಜಾದೂಗಾರ ಆನಂದ ಅವರು ನಗರಕ್ಕೆ ಆಗಮಿಸಿದ್ದಾರೆ. ಒಂದು ವಾರಗಳಿಂದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ  ಪ್ರದರ್ಶನಗೊಳ್ಳುತ್ತಿರುವ ಈ ಜಾದೂ ಪ್ರದರ್ಶನ ವೀಕ್ಷಣೆಗೆ ನಿತ್ಯ ನೂರಾರು ಜನರು ತೆರಳುತ್ತಿದ್ದಾರೆ.

ಆಕರ್ಷಕ ದೃಶ್ಯ ವೈಭವ, ಚಮಕ್...ಚಮಕ್ ರಂಗ ಸಜ್ಜಿಕೆ... ಪ್ರತಿ ಪ್ರದರ್ಶನಕ್ಕೂ ಬದಲಾಗುವ ಆನಂದ ಜಾದೂಗಾರ ಅವರ ಪೋಷಾಕು ಗಮನ ಸೆಳೆಯುತ್ತವೆ. ವಿಶ್ವದ ಕೆಲವೇ ಕೆಲ ಅದ್ಭುತ ಜಾದೂಗಾರರಲ್ಲೊಬ್ಬರಾದ ಆನಂದ ಜಾದೂಗಾರ ಅವರು ಕೇವಲ ತಮ್ಮ ಕೈಚಳಕದ ಜಾದೂ ಪ್ರದರ್ಶನವನ್ನಷ್ಟೇ ಪ್ರದರ್ಶಿಸುವುದಿಲ್ಲ. ಲಂಡನ್, ಫ್ರಾನ್ಸ್, ಚೀನಾ, ಅಮೆರಿಕಾ ಹೀಗೆ ಹಲವಾರು ದೇಶದ ಪ್ರಸಿದ್ಧ ಜಾದೂಗಾರರ ಕೈ ಚಳಕದ ಕೆಲ ಪ್ರದರ್ಶನಗಳನ್ನು ತಮ್ಮ ಕೈಚಳದ ಮೂಲಕ ತೋರಿಸುತ್ತಾರೆ.

ಸಂದೇಶ ಸಾರಲು...
ಆನಂದ ಜಾದೂಗಾರ ಅವರ ಈ ಜಾದೂ ಪ್ರದರ್ಶನ ಕೇವಲ ಜಾದೂ ಪ್ರದರ್ಶನವಷ್ಟೇ ಅಲ್ಲ. ಸಮಾಜಕ್ಕೆ, ದೇಶಕ್ಕೆ ಸೌಹಾರ್ದ ಬದುಕಿನ ಸಂದೇಶ ಸಾರುವಂಥ ಅಂಶಗಳನ್ನೊಳಗೊಂಡಿದೆ. ಸ್ವಾತಂತ್ರ್ಯ ಹೋರಾಟದ ದೃಶ್ಯಗಳು, ಬಾಪೂಜಿ ಕಂಡ ಕನಸು ಕುರಿತ ಕೆಲ ಕ್ಷಣದ ಚಿತ್ರಗಳು ಹಾಯ್ದು ಹೋಗುತ್ತವೆ.

ಪ್ರಸ್ತುತ ಭ್ರಷ್ಟಾಚಾರ, ರಾಜಕೀಯ ವ್ಯವಸ್ಥೆ,  ಪ್ರಜಾ ಹಿತ ಮರೆತ ರಾಜಕಾರಣಿಗಳು ಭಾರತ ಮಾತೆಯನ್ನು ಯಾವ ರೀತಿ ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಅಣ್ಣಾ ಹಜಾರೆ ಹೋರಾಟದ ಮಹತ್ವ ಹೀಗೆ  ಹಲವ ದೃಶ್ಯಾವಳಿಗಳು ವೇದಿಕೆ ಮೇಲೆ ಬಂದು ಹೋಗುತ್ತವೆ. ಹಾಸ್ಯ ಚಟಾಕಿ... ಗಂಭೀರ ಸಂದೇಶಗಳೊಂದು ಆನಂದ ಜಾದೂಗಾರ ತಂಡದ ಪ್ರದರ್ಶನ ವಿಶೇಷವಾಗಿ ಕಾಣಿಸುತ್ತದೆ.

ಅದ್ಭುತ ಪ್ರದರ್ಶನ
ಒಟ್ಟು 108 ಜನರನ್ನು ಈ ಜಾದೂಗಾರ ತಂಡ ಹೊಂದಿದೆ. ಇದರಲ್ಲಿ 65 ಜನ ಯುವಕ-ಯುವತಿಯರು, ಸಹ ಜಾದೂಗಾರರು ವೇದಿಕೆಯಲ್ಲಿದ್ದರೆ ಮತ್ತೊಂದಿಷ್ಟು ಜನ ಪೂರಕವಾಗಿ ಕೆಲಸ ಮಾಡುತ್ತಾರೆ. ಅಲ್ಲದೇ ತಮ್ಮದೇ ಆದ ರೀತಿ ಬ್ಲೈಂಡ್ ಫೋಲ್ಡ್ ಮೋಟರ್ ಸೈಕಲ್, ಹೈದಾರಾಬಾದ್‌ನ ಹುಸೇನ ಸಾಗರ ಕೆರೆಯಲ್ಲಿ ಮುಳುಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಆನಂದ ಜಾದೂಗಾರ ಅವರ ಪುತ್ರ `ಆಕಾಶ್ ಜಾದೂಗಾರ~ ಈ ಪೂರ್ಣ ತಂಡಕ್ಕೆ ಬೆನ್ನೆಲುಬಾಗಿ ನಿರ್ವಹಣೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT