ADVERTISEMENT

ಮಾರ್ಕಿಂಗ್‌ಗೆ ಹೌಹಾರುತ್ತಿರುವ ಜನ!

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 7:35 IST
Last Updated 10 ಜುಲೈ 2012, 7:35 IST

ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದಿಂದ ಸೂಪರ್ ಮಾರ್ಕೆಟ್‌ವರೆಗಿನ ರಸ್ತೆ ವಿಸ್ತರಣೆ ಕಾರ್ಯ ಈಗಾಗಲೇ ಆರಂಭಗೊಂಡಿದೆ.

ಕೇಂದ್ರ ಬಸ್ ನಿಲ್ದಾಣದ ಹತ್ತಿರ ಕೆಲ ಕಟ್ಟಡ, ಅಂಗಡಿ ಮುಂಗಟ್ಟುಗಳ ಎದುರಿನ ಕಟ್ಟೆ ತೆರವುಗೊಳಿಸಲಾಗಿದೆ. ನಗರಸಭೆ, ತಹಸೀಲ್ದಾರ ಕಚೇರಿ ಕಂಪೌಂಡ್ ಕಟ್ಟಡ, ಡಿಡಿಪಿಐ ಕಚೇರಿ ಕಂಪೌಂಡ್ ಕಟ್ಟಡಗಳೂ ತೆರವುಗೊಂಡಿವೆ.

ಈ ತೆರವುಗೊಂಡ ಸ್ಥಳದಲ್ಲಿ ರಸ್ತೆ ವಿಸ್ತರಣೆ ಕಾರ್ಯವನ್ನು 2-3 ದಿನಗಳಿಂದ ಜೆಸಿಬಿ ನಡೆಸಿದ್ದವು. ಸೋಮವಾರ ಮುಂಜಾನೆಯಿಂದ ಈ ರಸ್ತೆಗೆ ಡಾಂಬರೀಕರಣ ಕಾರ್ಯ ಶುರುವಾಗಿದೆ. ಸದರ ಬಜಾರ ಪೊಲೀಸ್ ಠಾಣೆ ಸಿಪಿಐ ಪಾಷಾ, ಇನ್ಸ್‌ಪೆಕ್ಟರ್ ದಯಾನಂದ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ವರ್ಗ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.

ಇಕ್ಕಟ್ಟಾದ ಮತ್ತು ಹದಗೆಟ್ಟ ರಸ್ತೆಯಲ್ಲಿಯೇ ಸಂಚರಿಸಿ ಸುಸ್ತಾದ ಜನತೆ ರಸ್ತೆ ಡಾಂಬರೀಕರಣ ಕಾಮಗಾರಿ ಕಂಡು ಅಬ್ಬಾ ಕೊನೆಗೂ ರಸ್ತೆ ಕೆಲ್ಸಾ ನಡೆದಿದೆಯಲ್ಲ ಎಂದು ವೀಕ್ಷಿಸಿದರು.

ಮಾರ್ಕಿಂಗ್: ಒಂದೆರೆಡು ದಿನದ ಹಿಂದೆ ಜೈಲ್ ಎದುರಿನ ರಸ್ತೆ ವಿಸ್ತರಣೆ ಕುರಿತು ಜಾಗ ಗುರುತಿಸುವ (ಮಾರ್ಕಿಂಗ್)  ಕಾರ್ಯವನ್ನು ನಗರಸಭೆ ಅಧಿಕಾರಿಗಳು ಕೈಗೊಂಡಿದ್ದರು. ಸೋಮವಾರ ಅದರ ಮುಂದಿನ ಭಾಗವಾಗಿ  ಏಕ ಮಿನಾರ್ ರಸ್ತೆಯ ಅಕ್ಕಪಕ್ಕದ ಕಟ್ಟಡಗಳಿಗೆ ಮಾರ್ಕಿಂಗ್ ಕಾರ್ಯ ನಡೆಸಿದರು.

ನಗರಸಭೆಯವರು ಏಕಾಏಕಿಯಾಗಿ ಬಂದು ಟೇಪ್ ಹಿಡಿದು ಅಳತೆ ಮಾಡುವುದು, ಮಾರ್ಕ್ ಹಾಕುತ್ತಿದ್ದುದನ್ನು ಕಂಡ ರಸ್ತೆ ಅಕ್ಕಪಕ್ಕದ ಅಂಗಡಿಗಳ ಮಾಲೀಕರು, ಕಟ್ಟಡ ಮಾಲೀಕರು ಈ ಬಗ್ಗೆ ಚರ್ಚಿಸಿದರು.

ಈ ರಸ್ತೆ `50~ ಅಡಿ ಅಗಲ ಆಗಬೇಕು. ಹೀಗಾಗಿ ಮಾರ್ಕಿಂಗ್ ಮಾಡಲಾಗುತ್ತಿದೆ. ರಸ್ತೆಯ ಮಧ್ಯೆ ಭಾಗದಿಂದ ಎಡಕ್ಕೆ 25 ಅಡಿ ಮತ್ತು ಬಲಕ್ಕೆ 25 ಅಡಿ ವಿಸ್ತರಣೆ ನಡೆಯಲಿದೆ ಎಂದು ನಗರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳು ವಿವರಣೆ ನೀಡಿ ಮಾರ್ಕಿಂಗ್ ಕಾರ್ಯ ಮುಂದುವರಿಸಿದರು. ಈ ಮಾರ್ಕಿಂಗ್ ಕಾರ್ಯ ಸೂಪರ್ ಮಾರ್ಕೆಟ್‌ವರೆಗೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಶೆಡ್ ತೆರವಿಗೆ ಆಕ್ರೋಶ: ತಹಸೀಲ್ದಾರ್ ಕಚೇರಿ ಪಕ್ಕ ಇರುವ ಬೆರಳಚ್ಚುಗಾರರ ಶೆಡ್ ತೆರವುಗೊಳಿಸುವ ನಗರಸಭೆ ಮತ್ತು ಜಿಲ್ಲಾಡಳಿದ ಕ್ರಮವನ್ನು ಬೆರಳಚ್ಚುಗಾರರು ಖಂಡಿಸಿದರು.

ರಸ್ತೆ ವಿಸ್ತರಣೆಗೆ ಈಗಾಗಲೇ 7-8 ಶೆಡ್ ತೆರವುಗೊಳಿಸಲಾಗಿದೆ. ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಈಗ ಇನ್ನುಳಿದ ಶೆಡ್‌ಗಳನ್ನು ತೆರವುಗೊಳಿಸಿದರೆ ಕಷ್ಟ ಎಂದು ಸಮಸ್ಯೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.