ದೇವದುರ್ಗ: ಮೇಲ್ವಿಚಾರಕರ ನಿರ್ಲಕ್ಷ್ಯ ದೋರಣೆಯಿಂದಾಗಿ ಕಳಪೆ ಆಹಾರ, ಕುಡಿಯುವ ನೀರಿನ ಸಮಸ್ಯೆ ಮತ್ತು ವಸತಿ ನಿಲಯದ ಇತರ ಪ್ರಮುಖ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸದೆ ಇರುವುದನ್ನು ಖಂಡಿಸಿ ತಾಲ್ಲೂಕಿನ ಮಸರಕಲ್ ಗ್ರಾಮದ ಕೇಂದ್ರೀಯ ಮೊರಾರ್ಜಿ ವಸತಿ ಶಾಲೆ ಮಕ್ಕಳು ಗುರುವಾರ ದಿಢಿ ೀರನೆ ರಸ್ತೆಗೆ ಇಳಿದು ಪ್ರತಿಭಟಿಸಿದ ಪ್ರಸಂಗ ನಡೆಯಿತು.
ಮಸರಕಲ್ ಗ್ರಾಮದಿಂದ ಸುಮಾರು ಮೂರು ಕಿಮೀ ದೂರದ ಹೊರವಲಯದಲ್ಲಿ ಬರುವ ಕೇಂದ್ರೀಯ ಮೊರಾರ್ಜಿ ವಸತಿ ಶಾಲೆಯನ್ನು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿದೆ. ಸದರಿ ವಸತಿ ನಿಲಯವನ್ನು ಸುಮಾರು ನಾಲ್ಕು ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ನಡೆಸಿದ ನಂತರ ಕಳೆದ ವರ್ಷ ಹೊಸ ಕಟ್ಟಡಕ್ಕೆ ತರಾತುರಿಯಲ್ಲಿ ಸ್ಥಳಾಂತರಗೊಂಡರೂ ಇಂದಿಗೂ ಮೂಲ ಸೌಕರ್ಯ ಇಲ್ಲದೆ ಬೆಳಗಾದರೆ ಮಕ್ಕಳು ಪರದಾಡುವಂತಾಗಿದೆ. ಮುಖ್ಯ ರಸ್ತೆಯಿಂದ ವಸತಿ ಶಾಲೆಗೆ ಇಂದಿಗೂ ಸರಿಯಾದ ರಸ್ತೆ ಇಲ್ಲ. ಕಾಲುವೆ ಪಕ್ಕದ ದಾರಿಯೇ ಮಕ್ಕಳಿಗೆ ಗತಿಯಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೆ ತುಂಬಿ ಹರಿಯುವ ಕಾಲುವೆಗೆ ಬೀಳುವುದು ಗ್ಯಾರಂಟಿ. ಗ್ರಾಮದಲ್ಲಿ ವಸತಿ ನಿಲಯ ಆರಂಭವಾಗಿನಿಂದಲೂ ಪ್ರತಿವರ್ಷ ವಿವಿಧ ಬೇಡಿಕೆಗಳಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿರುವುದು ಅಧಿಕಾರಿಗಳಿಗೆ ಸಾಮಾನ್ಯವಾಗಿದ್ದರೂ ಪರಿಹಾರಕ್ಕೆ ಮಾತ್ರ ಇಲಾಖೆ ಮುಂದೆ ಬಂದಿಲ್ಲ ಎಂಬುವುದು ಮಕ್ಕಳ ಆರೋಪವಾಗಿದೆ.
ಬೇಡಿಕೆ: ವಸತಿ ನಿಲಯದಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದರೂ ಇಂದಿಗೂ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿನಿತ್ಯ ಕಳಪೆ ಅಹಾರ ನೀಡುವುದರಿಂದ ಬಹುತೇಕ ಮಕ್ಕಳಿಗೆ ಹೊಟ್ಟೆ ನೋವು, ಜ್ವರ ಹಾಗೂ ಮತ್ತಿತರ ಕಾಯಿಲೆ, ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದರೂ ನೋಟ್‌ಬುಕ್ ಮತ್ತು ಅಗತ್ಯವಾದ ಶಿಕ್ಷಣ ಸಾಮಗ್ರಿಗಳು ವಿತರಣೆ ಇಲ್ಲದೆ ಇರುವುದರಿಂದ ತೊಂದರೆ ಎದುರಾಗಿದ್ದು ಕೂಡಲೇ ಇಡೇರಿಸಬೇಕೆಂದು ಮಕ್ಕಳು ಒತ್ತಾಯಿಸಿದರು.
ಭರವಸೆ: ಇಲಾಖೆಯ ತಾಲ್ಲೂಕು ಅಧಿಕಾರಿ ರಜೆ ಮೇಲೆ ಹೋಗಿರುವುದರಿಂದ ಅವರು ಬಂದ ಕೂಡಲೇ ಸದರಿ ಬೇಡಿಕೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಲಾಗುವುದು ಎಂದು ಇಲಾಖೆಯ ಮೇಲ್ವಿಚಾರಕ ರವಿಕುಮಾರ ಮಕ್ಕಳಿಗೆ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆದರು.
ಚಿಕಿತ್ಸೆ: ಬುಧವಾರ ರಾತ್ರಿ ಸೇವನೆ ಮಾಡಲಾಗಿತ್ತು ಎನ್ನಲಾದ ಕಳಪೆ ಆಹಾರದ ಪ್ರಯುಕ್ತ ಗುರುವಾರ ಮುಂಜಾನೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವು ಮಕ್ಕಳು ತೀವ್ರ ಹೊಟ್ಟೆನೋವಿನಿಂದ ಬಳಲಿದ ಕಾರಣ ಪಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಸಂಚಾರ ಸ್ಥಗಿತ: ಅನೇಕ ದಿನಗಳ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಗುರುವಾರ ಮುಂಜಾನೆ 9ಗಂಟೆಗೆ ವಸತಿ ನಿಲಯ ಮಕ್ಕಳು ದಿಢಿ ೀರನೆ ದೇವದುರ್ಗ -ರಾಯಚೂರು ಮುಖ್ಯ ರಸ್ತೆ (ರಾಜ್ಯ ಹೆದ್ದಾರಿ) ಮಸರಕಲ್ ಗ್ರಾಮದ ಮುಂದೆ ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆ ತಡೆ ಚಳುವಳಿ ನಡೆಸಿದ ಕಾರಣ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಪ್ರಯಾಣಿಕರಿಗೆ ಇನ್ನಿಲ್ಲದ ತೊಂದರೆ ಎದುರಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.