ADVERTISEMENT

ಯಾಟಗಲ್ ಕುಡಿಯುವ ನೀರಿನ ಯೋಜನೆ ಮಾರ್ಚ್‌ಗೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 7:05 IST
Last Updated 18 ಆಗಸ್ಟ್ 2012, 7:05 IST

ದೇವದುರ್ಗ: ತೀವ್ರ ಕುಡಿಯುವ ನೀರಿನ ತೊಂದರೆಯನ್ನು ಅನುಭವಿಸುತ್ತಿರುವ ಕೊಪ್ಪರ, ಗೂಗಲ್ ಮತ್ತು ಜೇರಬಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 12 ಗ್ರಾಮಗಳ ಬೃಹತ್ ಕುಡಿಯುವ ನೀರಿನ ಕಾಮಗಾರಿ ಬರುವ ಮಾಚ್ ಒಳಗೆ ಮುಗಿಸಿ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರು ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ ಕುಮಾರ ಜೈನ್ ತಿಳಿಸಿದರು.

ಶುಕ್ರವಾರ ತಾಲ್ಲೂಕಿನ ವಿವಿಧ ಕಾಮಗಾರಿಗಳ ವೀಕ್ಷಣೆಗೆಂದು ಆಗಮಿಸಿದ್ದ ಅವರು ಕೊಪ್ಪರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಯಾಟಗಲ್ ಕ್ರಾಸ್ ಬಳಿ ಕಳೆದ ಹತ್ತು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಬೃಹತ್ ಕುಡಿಯುವ ನೀರಿನ ಯೋಜನೆಯನ್ನು ಪರಿಶೀಲಿಸಿದ ಅವರು ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನೆನಗುದಿಗೆ ಬಿದ್ದ ಯೋಜನೆಯನ್ನು ಭೂ ಸೇನಾ ನಿಗಮಕ್ಕೆ ನೀಡಲಾಗಿತ್ತು, ಕಳೆದ ಆರು ತಿಂಗಳ ಹಿಂದೆ ನೆನೆಗುದಿಗೆ ಬಿದ್ದ ಕಾಮಗಾರಿ ಯನ್ನು ಆರಂಭಿಸಲಾಗಿದ್ದು, ತಾಲ್ಲೂಕಿನಲ್ಲಿ ತೀವ್ರ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ಮತ್ತು ಸದರಿ ಯೋಜನೆಯಲ್ಲಿ ಬರುವ ಸಲಿಕ್ಯಾಪೂರ ಮತ್ತು ಚಿಕ್ಕಬೂದೂರು ಗ್ರಾಮಗಳಿಗೆ ಮೊದಲ ಆದ್ಯತೆ ಪ್ರಕಾರ ಕುಡಿಯುವ ನೀರು ನೀಡಲಾಗಿದ್ದು, ಇದಕ್ಕಾಗಿ 50 ಲಕಷ ರೂಪಾಯಿ ಖರ್ಚು ಮಾಡಲಾಗಿದೆ.

ಒಟ್ಟು ಯೋಜನೆಗೆ ಈಗಾಗಲೇ 2.30ಕೋಟಿ ರೂಪಾಯಿ ಖರ್ಚು ಮಾಡಿದಂತಾಗಿದ್ದು, ಯೋಜನೆಯ ಪ್ರಕಾರ ಬರುವ ಮಾರ್ಚ್ ತಿಂಗಳಲ್ಲಿ ಬಾಕಿ ಉಳಿದ 9 ಗ್ರಾಮಗಳಿಗೆ ಕುಡಿಯುವ ನೀರು ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಭೇಟಿ: ಅರಕೇರಾ, ಹೇಮನೂರು ಮತ್ತು ಕೋತ್ತದೊಡ್ಡಿ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಯೋಜನೆಗಳಿಂದ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.