ADVERTISEMENT

`ಯಾದವ ಸಮುದಾಯಕ್ಕೆ ಅಪಮಾನ'

ಎ. ಕೃಷ್ಣಪ್ಪಗೆ ಕಾಂಗ್ರೆಸ್ ಟಿಕೆಟ್ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 9:35 IST
Last Updated 18 ಏಪ್ರಿಲ್ 2013, 9:35 IST

ರಾಯಚೂರು: ಕರ್ನಾಟಕ ರಾಜ್ಯದ ಯಾದವ್ ಸಮಾಜದ ಮುಖಂಡ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎ.ಕೃಷ್ಣಪ್ಪ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದೇ ಕಾಂಗ್ರೆಸ್ ಪಕ್ಷವು ಘೋರ ಅನ್ಯಾಯ ಮತ್ತು ಅಪಮಾನ ಮಾಡಿದೆ. ಇದು ಯಾದವ ಸಮಾಜ ಬಾಂಧವರಿಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ರಾಯಚೂರು ಜಿಲ್ಲಾ ಯಾದವ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಂಬುನಾಥ ಯಾದವ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎ ಕೃಷ್ಣಪ್ಪ ಅವರು ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ಕಾರ್ಯ ಮಾಡಿದ್ದಾರೆ. ಯಾದವ ಸಮಾಜದ ಏಳ್ಗೆಗೆ ಶ್ರಮಿಸಿದ್ದಾರೆ.

ಹಲವು ಬಾರಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆಗೊಂಡು ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕೆಪಿಸಿಸಿಯ ಹಿರಿಯ ಉಪಾಧ್ಯಕ್ಷರಾಗಿದ್ದರು. ಅಂಥವರು ಈ ಬಾರಿ ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡದೇ ಅನ್ಯಾಯ ಮಾಡಿದೆ ಎಂದರು.

ಎ ಕೃಷ್ಣಪ್ಪ ಅವರು ಕೇವಲ ಕಾಂಗ್ರೆಸ್ ಪಕ್ಷ, ಯಾದವ ಸಮಾಜಕ್ಕಷ್ಟೇ ಮುಖಂಡರಲ್ಲ. ಸಮಸ್ತ ಹಿಂದುಳಿದ ವರ್ಗದ ಹಿರಿಯ ನಾಯಕರಾಗಿದ್ದರು. ಅಂಥವರನ್ನೇ ಕಾಂಗ್ರೆಸ್ ಪಕ್ಷ ಕಡೆಗಣಿಸಿದೆ. ಅವರಿಗೆ ಟಿಕೆಟ್ ಕೊಡದೇ ಇರುವುದನ್ನು ಹಿಂದುಳಿದ ವರ್ಗದ ನಾಯಕರೆನಿಸಿಕೊಂಡ ಕುರುಬ ಸಮುದಾಯದ ಮುಖಂಡರಾದ ಸಿದ್ಧರಾಮಯ್ಯ ಅವರು ಖಂಡಿಸಬೇಕಿತ್ತು. ಎ ಕೃಷ್ಣಪ್ಪ ಅವರಿಗೆ ಟಿಕೆಟ್ ಕೊಡದೇ ಇರುವುದು ಹಿಂದುಳಿದ ವರ್ಗಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಪ್ರಶ್ನೆ ಮಾಡಿ ಟಿಕೆಟ್ ಕೊಡಿಸುವ ಪ್ರಯತ್ನ ಮಾಡಬೇಕಿತ್ತು ಎಂದು ಹೇಳಿದರು.

ಸಿದ್ಧರಾಮಯ್ಯ ಅವರೂ ಈ ಕುರಿತು ಈ ಬಗ್ಗೆ ಏನೂ ಮಾತನಾಡಿಲಿಲ್ಲ. ಎ ಕೃಷ್ಣಪ್ಪ ಅವರಿಗಿಂತ ಕಿರಿಯವರಾದ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರೂ ಎ ಕೃಷ್ಣಪ್ಪ ಮತ್ತು ಯಾದವ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನಹರಿಸದೇ ಇರುವುದು ಖಂಡನೀಯ ಎಂದರು.

ಎ. ಕೃಷ್ಣಪ್ಪ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದ್ದು, ಯಾದವ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ. ಯಾದವ ಸಮಾಜದ ಅನೇಕ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸಿ ಕೆಲಸ ಮಾಡುತ್ತಿದ್ದ ಮುಖಂಡರಿಗೆ ನೋವನ್ನು ಕಾಂಗ್ರೆಸ್ ಪಕ್ಷ ಕೊಟ್ಟಿದೆ. ಇದನ್ನು ಯಾದವ ಸಮುದಾಯ ಖಂಡಿಸುತ್ತದೆ. ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮುದಾಯದ ಬಾಂಧವರು ಮತ ಹಾಕಬಾರದು ಎಂದು ಮನವಿ ಮಾಡಲಾಗುತ್ತದೆ ಎಂದು ಹೇಳಿದರು.

ಯಾದವ ಯುವ ಸಂಘದ ಜಿಲ್ಲಾಧ್ಯಕ್ಷ ಆಂಜನೇಯ ವಕೀಲ, ರಾಘವೇಂದ್ರ, ಶಿವಕುಮಾರ, ಈರಣ್ಣ, ಸೋಮನಾಥ್, ರಾಘವೇಂದ್ರ, ರವಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.