ADVERTISEMENT

ರಸಗೊಬ್ಬರ ಕೊರತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 10:55 IST
Last Updated 9 ಸೆಪ್ಟೆಂಬರ್ 2011, 10:55 IST

ರಾಯಚೂರು: ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ಅವರು ತಿಳಿಸಿದರು.

ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರೈತರಿಗೆ ರಸಗೊಬ್ಬರ  ಪೂರೈಕೆಗೆ ಸಂಬಂಧಿಸಿದ ಕೃಷಿ, ಸಹಕಾರ ಇಲಾಖೆ ಹಾಗೂ ರೈತರೊಂದಿಗೆ ನಡೆದ ಸಭೆಯಲ್ಲಿ  ಮಾತನಾಡಿದರು.

ಆಗಸ್ಟ್ ಅಂತ್ಯದವರೆಗೆ ಜಿಲ್ಲೆಗೆ 1.10 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ  ಬೇಡಿಕೆ ಇದ್ದು, ಇದುವರೆಗೆ 95 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬಂದಿದೆ. ಇದರಲ್ಲಿ 56 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಮಾರ್ಕೇಟಿಂಗ್ ಫೆಡರೇಶನ್ ಹಾಗೂ ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಮೂಲಕ ರೈತರಿಗೆ ದೊರಕಿಸುವ ನಿಟ್ಟಿನಲ್ಲಿ ಹಂಚಿಕೆ ಮಾಡಲಾಗಿದೆ. ಜಿಲ್ಲೆಗೆ ಸೋಮವಾರದಂದು  ಇನ್ನೂಳಿದ ಬೇಡಿಕೆಯ ಪ್ರಮಾಣದ ರಸಗೊಬ್ಬರ  ಬರಲಿದೆ ಎಂದು ವಿವರಿಸಿದರು.

ರೈತರಿಗೆ ಅವಶ್ಯಕ ಇರುವ ರಸಗೊಬ್ಬರದ ಮಾಹಿತಿಯನ್ನು ಸಹಕಾರ ಸಂಘಗಳಿಗೆ ಮಾಹಿತಿ ನೀಡಿದರೆ, ಅಗತ್ಯಕ್ಕೆ ಅನುಗುಣವಾಗಿ ರಸಗೊಬ್ಬರ ಪೂರೈಕೆ ಮಾಡಲಾಗುವುದು. ರಸಗೊಬ್ಬರ ಹಂಚಿಕೆಗೆ ರೈತರ ಸಹಕಾರ ನೀಡಬೇಕು. ರಸಗೊಬ್ಬರ ಪೂರೈಕೆಗೆ ಸಂಬಂಧಿಸಿದಂತೆ ಸಾರಿಗೆ ವೆಚ್ಚದಲ್ಲಿ ವ್ಯತ್ಯಾಸವಾಗಿರುವ ಬಗ್ಗೆ  ಪರಿಶೀಲನೆ ನಡೆಸಲಾಗುವುದು ಎಂದರು.

ರೈತರಿಗೆ ರಸಗೊಬ್ಬರ ಪೂರೈಕೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ರೈತರಿಗೆ ರಸಗೊಬ್ಬರದ  ಕೊರತೆಯಾಗದಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಹಳೆಯ ರಸಗೊಬ್ಬರದ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ರಸಗೊಬ್ಬರ ಸಂಗ್ರಹ ಹಾಗೂ ಪ್ರಭಾವಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ವಿತರಣೆ ಮಾಡಬಾರದು.

ರೈತರ ಹಿಡುವಳಿ ಆಧಾರದ ಮೇಲೆ ರಸಗೊಬ್ಬರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಅವರು ಸಭೆಗೆ ತಿಳಿಸಿದರು.
 
ರೈತರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಂಗದೊಡ್ಡಿ, ನರಸಿಂಗರಾವ್ ಕುಲಕರ್ಣಿ ಚಂದ್ರಬಂಡಾ, ಬೂದೆಯ್ಯಸ್ವಾಮಿ ದೇವದುರ್ಗ ಹಾಗೂ ಕೃಷಿ, ಸಹಕಾರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.