ರಾಯಚೂರು: ಇಲ್ಲಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಸೋಮವಾರ ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ ವಸಂತಕುಮಾರ ಹಾಗೂ ಪಕ್ಷದ ಮುಖಂಡರು ರಾಜೀವಗಾಂಧಿ ಹಾಗೂ ದೇವರಾಜು ಅರಸು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ ವಸಂತಕುಮಾರ ಅವರು, ರಾಷ್ಟ್ರದ ದೂರವಾಣಿ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಕಾರಿ ಬೆಳವಣಿಗೆಗೆ ದಿವಂಗತ ಮಾಜಿ ಪ್ರಧಾನಿ ರಾಜೀವಗಾಂಧಿ ಅವರೇ ಕಾರಣೀಕರ್ತರು. ಈಗಿನ ಯುವ ಪೀಳಿಗೆಯು ಅನುಭವಿಸುತ್ತಿರುವ ಮಾಹಿತಿ ತಂತ್ರಜ್ಞಾನ ಸವಲತ್ತುಗಳು ರಾಜೀವಗಾಂಧಿ ಅವರ ಕೊಡುಗೆ. ಗ್ರಾಮೀಣ ಪ್ರದೇಶದ ಏಳ್ಗೆಗೆ ಗಂಭೀರ ಚಿಂತನೆ ನಡೆಸಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅಧಿಕಾರ ವಿಕೇಂದ್ರೀಕರಣದ ಕ್ರಾಂತಿಕಾರಿ ನಿರ್ಣಯ ಕೈಗೊಂಡ ಧೀಮಂತ ನಾಯಕ ಎಂದು ಹೇಳಿದರು.
ದಿವಂಗತ ರಾಜೀವಗಾಂಧಿ ಅವರು ಈ ದೇಶದ ಯುವ ಪೀಳಿಗೆಯ ಪ್ರತೀಕವಾಗಿದ್ದು, ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ತಮ್ಮದೇ ಆದ ರೀತಿಯ ವಿಶೇಷ ಕೊಡುಗೆ ನೀಡಿದ್ದಾರೆ. ಸಾರ್ಕ್ ದೇಶಗಳ ಸಮೂಹ ರಚನೆ ಮಾಡಿ ಆ ಮೂಲಕ ಸಾರ್ಕ್ ರಾಷ್ಟ್ರಗಳ ಒಕ್ಕೂಟಕ್ಕೆ ಪ್ರಪಂಚದಲ್ಲಿ ವಿಶೇಷ ಸ್ಥಾನಮಾನ ಸಿಗಲು ಕಾರಣೀಭೂತರಾದವರು. ಅವರು ಪ್ರಧಾನಿಗಳಾಗಿದ್ದ ಅವಧಿಯಲ್ಲಿ ಈ ದೇಶ ಕ್ಷಿಪ್ರ ಗತಿಯಲ್ಲಿ ಪ್ರಗತಿ ಸಾಧಿಸಿತು ಎಂದು ವಿವರಿಸಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಗಳ ನೇತಾರ ದಿವಂಗತ ದೇವರಾಜ ಅರಸು ಅವರು ಈ ರಾಜ್ಯಕ್ಕೆ ನೀಡಿದ ಕೊಡುಗೆ ಅತ್ಯಂತ ಮಹೋನ್ನತವಾದುದು. ಅವರು ಕೈಗೊಂಡ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಎರಡನೇ ಸ್ಥರದ ಹಲವಾರು ನಾಯಕರು ರಾಜಕೀಯ ಸ್ಥಾನಮಾನ ಪಡೆದು ಸಚಿವರಾದರು. ಅರಸು ಅವರ ಕೃಪೆಯಿಂದ ರಾಜ್ಯದ ಮುಖ್ಯಮಂತ್ರಿಗಳಾಗಿಯೂ ಸೇವೆ ಸಲ್ಲಿಸಿದರು ಎಂದು ನುಡಿದರು.
ಮಾಜಿ ಇಂದಿರಾ ಗಾಂಧಿ ಅವರು ರೂಪಿಸಿದ 20 ಅಂಶಗಳ ಕಾರ್ಯಕ್ರಮವನ್ನು ರಾಷ್ಟ್ರದಲ್ಲಿಯೇ ಅತ್ಯಂತ ಪರಿಣಾಮಕಾರಿ ರೀತಿ ಅನುಷ್ಠಾನಗೊಳಿಸಿದವರು ದೇವರಾಜ ಅರಸು ಅವರು ಎಂದು ಹೇಳಿದರು.
ದಿವಂಗತ ರಾಜೀವಗಾಂಧಿ ಹಾಗೂ ದಿವಂಗತ ದೇವರಾಜ ಅರಸು ಈ ಇಬ್ಬರು ನಾಯಕರನ್ನು ಕಾಂಗ್ರೆಸ್ ಪಕ್ಷ ಮತ್ತು ಕಾರ್ಯಕರ್ತರು ಸ್ಮರಿಸುತ್ತಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಕ್ಷವನ್ನು ಸಮರ್ಥ ರೀತಿ ಸಂಘಟನೆ ಮಾಡಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಜಿ.ಬಸವರಾಜರೆಡ್ಡಿ, ನಗರಸಭೆ ಸದಸ್ಯರಾದ ಜಿ.ಶಿವಮೂರ್ತಿ, ಕೆ.ಶಾಂತಪ್ಪ, ದರೂರು ಬಸವರಾಜ ಪಾಟೀಲ್, ಈಶಪ್ಪ ಹಾಗೂ ಪಕ್ಷದ ಮುಖಂಡರಾದ ಬಿ.ವಿ ನಾಯಕ, ಅಮರೇಗೌಡ ಹಂಚಿನಾಳ, ಜಯವಂತರಾವ್ ಪತಂಗೆ, ರವೀಂದ್ರ ಜಾಲ್ದಾರ್, ರುದ್ರಪ್ಪ ಅಂಗಡಿ, ಉಮೇಶ ಬಳಿಗಾರ, ಲಕ್ಷ್ಮಣ, ಸುಧಾಮ, ಉರುಕುಂದಪ್ಪ ನಾಯಕ, ಸುಧಾಕರರೆಡ್ಡಿ, ಲಾಲು ನಾಯಕ, ಬಲರಾಮರೆಡ್ಡಿ, ರಾಣಿ ರಿಚರ್ಡ್, ವಿದ್ಯಾ ಸಾಗರಿ, ಮಾಲಾ, ನಳಿನಿ, ಎಚ್ ಶಾಂತಪ್ಪ ರಾಂಪೂರ, ಪೋತಗಲ್ ಶ್ರೀನಿವಾಸ, ಪ್ರಕಾಶ ಕುಲಕರ್ಣಿ, ರಾಮಕೃಷ್ಣ ನಾಯಕ, ಜೆ ತಿಮ್ಮಪ್ಪ, ಹಾಜಿ ಬಾಬು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.