ADVERTISEMENT

ರಾಯಚೂರಿನಲ್ಲಿಯೇ ಐಐಟಿ ಸ್ಥಾಪಿಸಿ

ಜನಜಾಗೃತಿ ಜಾಥಾ ಸಮಾರೋಪ;ಶಾಸಕ ನಡಹಳ್ಳಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 9:00 IST
Last Updated 29 ಜೂನ್ 2015, 9:00 IST
ರಾಯಚೂರು ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಜನಜಾಗೃತಿ ಜಾಥಾ ಸಮಾರೋಪ ಸಮಾರಂಭದಲ್ಲಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ  ಮಾತನಾಡಿದರು
ರಾಯಚೂರು ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಜನಜಾಗೃತಿ ಜಾಥಾ ಸಮಾರೋಪ ಸಮಾರಂಭದಲ್ಲಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮಾತನಾಡಿದರು   

ರಾಯಚೂರು: ರಾಯಚೂರಲ್ಲೇ ಐಐಟಿ ಸ್ಥಾಪಿಸಬೇಕು. ಇದಕ್ಕೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲೂ ಸಿದ್ಧ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಜನಜಾಗೃತಿ ಜಾಥಾ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಯಚೂರಿನಲ್ಲಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಅದರ ಲಾಭ ದಕ್ಷಿಣ ಕರ್ನಾಟಕಕ್ಕೆ ಆಗುತ್ತಿದೆ. ಇನ್ನು ಮುಂದೆ ಇಂತಹ ಅನ್ಯಾಯಕ್ಕೆ ಅವಕಾಶ ಇಲ್ಲ. ಈ ಜಿಲ್ಲೆಗೆ ದಿನದ 24 ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂದು  ಆಗ್ರಹಿಸಿದರು.

ಮನೆಗೆ ಒಬ್ಬ ಯುವಕರಂತೆ ಉತ್ತರ ಕರ್ನಾಟಕದಲ್ಲಿ 1.17 ಲಕ್ಷ ಯುವ ಜನರ ಪಡೆ ಕಟ್ಟಿ ವ್ಯವಸ್ಥೆ ಬದಲಾಗುವವರೆಗೆ ಹೋರಾಟ ಮಾಡಲಾಗುತ್ತದೆ. ಈಗ ಹತ್ತಿರುವ ನೋವಿನ ಕಿಡಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಆಡಳಿತಗಾರರನ್ನು ಜ್ವಾಲೆಯಾಗಿ ಸುಡಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ಸಂಗ್ರಹಿಸಿದ ಲೆವಿ ಭತ್ತದ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಲ್ಲಿ ಜನರಿಗೆ ವಿತರಿಸುವ ಪಡಿತರಕ್ಕೆ ಬಳಕೆ ಮಾಡಲಾಗುತ್ತಿದೆ. ಆದರೆ, ಅಕ್ಕಿ ಚೀಲದ ಮೇಲೆ ಯಾರದ್ದೋ ಭಾವಚಿತ್ರ ಇರುವುದು ಎಷ್ಟು ಸರಿ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ ಅವರು, ಹಟ್ಟಿಯಲ್ಲಿ ಬಂಗಾರ ಬಗೆದುಕೊಂಡು ಇಲ್ಲಿನ ಜನರಿಗೆ ಕುಡಿಯಲು ನೀರನ್ನು ಕೊಡದ ಸರ್ಕಾರ ಇದ್ದರೇನೂ ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಸಿದ್ದರಾಮಯ್ಯ ಅಲ್ಲ, ಸೋನಿಯಾ ಗಾಂಧಿ, ಗುಲಾಮಗಿರಿ ಮಾಡುವ ಕಾಂಗ್ರೆಸ್‌ ನಾಯಕರಿಗೆ ಸ್ವಂತ ಆಲೋಚನೆ ಇಲ್ಲ ಎಂದು ಟೀಕಿಸಿದರು.

ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ನಿವೃತ್ತ ಪ್ರೊ.ಚಚಡ, ಧಾರವಾಡದ ವಕೀಲ ಬಿ.ಡಿ.ಹಿರೇಮಠ ಮಾತನಾಡಿದರು. ಕಲಾವಿದರಾದ ರಾಜು ತಾಳಿಕೋಟೆ ಇಂದುಮತಿ ಸಾಲಿಮಠ, ಡಾ.ರಜಾಕ್‌ ಉಸ್ತಾದ್‌, ಇಟಗಿ ಮೇಲುಗದ್ದಿಗೆ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಸೇರದಿಂತೆ ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

ಸಮಾರಂಭಕ್ಕೂ ಮೊದಲು ನಗರದ ಬಸವೇಶ್ವರ ವೃತ್ತದಿಂದ ಬೈಕ್‌ ರ್‍್ಯಾಲಿ  ಮತ್ತು ಮೆರವಣಿಗೆಗೆ ಚಾಲನೆ ನೀಡ ಲಾಯಿತು. ಡೊಳ್ಳು ಕುಣಿತ ಹಾಗೂ ಜಾನಪದ ಕಲೆಗಳ ವಿವಿಧ ಕಲಾ ತಂಡಗಳ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT