ADVERTISEMENT

ರಾಯಚೂರು ಜಾಗೃತಿ ಸಮಿತಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2011, 19:30 IST
Last Updated 10 ಏಪ್ರಿಲ್ 2011, 19:30 IST

ರಾಯಚೂರು: ಸಮಾಜದ ಪ್ರತಿ ಹಂತದಲ್ಲೂ ಗಂಡಾಂತರ ಸಮಸ್ಯೆಗಳು ಎದುರಾಗುತ್ತಿವೆ. ಈ ಬಗ್ಗೆ ಯುವ ಸಮುದಾಯ ಜನಜಾಗೃತಿ ಮೂಡಿಸಬೇಕಿದೆ. ಜನಪರ ಕಾರ್ಯಗಳನ್ನು ಕೈಗೊಂಡು ಜವಾಬ್ದಾರಿ ಮೆರೆಯಬೇಕಿದೆ ಎಂದು ಶಾಸಕ ಸಯ್ಯದ್ ಯಾಸಿನ್ ಹೇಳಿದರು.ಭಾನುವಾರ ಇಲ್ಲಿನ ಮಹಾಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ರಾಯಚೂರು ಜಾಗೃತಿ ಸಮಿತಿ’ ಎಂಬ ನೂತನ ಸಂಘಟನೆ ಉದ್ಘಾಟಿಸಿ ಮಾತನಾಡಿದರು.
 

ಶಿಕ್ಷಣ, ಆರೋಗ್ಯ, ಕಾನೂನು ಅರಿವು ನೆರವು, ರಸ್ತೆ ಸುರಕ್ಷತೆ, ಸಾಂಸ್ಕೃತಿ ಕಾರ್ಯಕ್ರಮಗಳಂಥ ಕಾರ್ಯಕೈಗೊಳ್ಳುವ ಸಂಘಟನೆ ಉದ್ದೇಶ ಮಹತ್ವದ್ದಾಗಿದೆ. ಯುವ ಸಮುದಾಯದಲ್ಲಿ ಇಂಥ ಜಾಗೃತಿ ಬಂದಿರುವುದು ಸಂತಸದ ಸಂಗತಿ ಎಂದು ಹೇಳಿದರು.ಮತ್ತೋರ್ವ ಅತಿಥಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶೇಖ್ ರಿಜ್ವಾನ್, “ಕೆಲಸ ಮಾಡದ ಜನಪ್ರತಿನಿಧಿಗಳ ಮನೆಗೆ ಘೆರಾವ್ ಹಾಕಬೇಕು. ಕೈ ಕಡಿ, ರುಂಡ ಕಡಿ ಎನ್ನುವವರನ್ನು ಮನೆಗೆ ಕಳುಹಿಸಿ” ಎಂದು ಸಲಹೆ ಮಾಡಿದರು.
 

ಹೋರಾಟ ಮಾಡಿಯೇ ಪರಿಹಾರ ಕಂಡುಕೊಳ್ಳಬೇಕಾದ ಸ್ಥಿತಿಯಲ್ಲಿ ಯುವ ಸಮುದಾಯ ಜಾಗೃತಿ ಸಂಘಟನೆ ರೂಪಿಸಿರುವುದು ಗಮನಾರ್ಹ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಯ್ಯಪ್ಪ ತುಕ್ಕಾಯಿ ಹೇಳಿದರು.ಮಾಜಿ ಶಾಸಕ ಎ.ಪಾಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಗಸ್ತಿ ತಿಳಿಸಿದರು. ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಜಿ.ಬಸವರಾಜರೆಡ್ಡಿ, ಸಮಿತಿ ಅಧ್ಯಕ್ಷ ಜಿ.ತಿಮ್ಮಾರೆಡ್ಡಿ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಉಪಾಧ್ಯಕ್ಷ ನಿಮೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.