ADVERTISEMENT

ರಾಯಚೂರು: ಭೂಸ್ವಾಧೀನಕ್ಕೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:27 IST
Last Updated 6 ಡಿಸೆಂಬರ್ 2012, 6:27 IST

ರಾಯಚೂರು: ನಗರದ ಬಾಪನಯ್ಯದೊಡ್ಡಿ ಭೂ ಸ್ವಾಧೀನ ರದ್ದಾಗಲು ನಗರಸಭೆ ನಿರ್ಲಕ್ಷ್ಯವೇ ಕಾರಣವಾಗಿದೆ. ಕೂಡಲೇ ನಗರಸಭೆಯು ಮರು  ಪ್ರಸ್ತಾವನೆ ಸಲ್ಲಿಸಬೇಕು. ಹರಿಜನವಾಡ ಬಡಾವಣೆ ನಿವಾಸಿಗಳಿಗೆ ಶೌಚಾಲಯ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ನವರತ್ನ ಯುವಕ ಸಂಘದ ನೇತೃತ್ವದಲ್ಲಿ ಬಡಾವಣೆ ಜನತೆ ನಗರಸಭೆ ಎದುರು ಮಂಗಳವಾರ ಧರಣಿ ನಡೆಸಿದರು.

ತಾವು ನಡೆಸುತ್ತಿರುವ ಈ ಧರಣಿ ಅನಿರ್ದಿಷ್ಟವಾಗಿದೆ. ನಗರಸಭೆಗೆ ಹಲವು ವರ್ಷಗಳಿಂದ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರೂ ಸ್ಪಂದಿಸಿಲ್ಲ. ಪ್ರತಿ ಹಂತದಲ್ಲೂ ಹೋರಾಟ ಮಾಡಿಯೇ ನಗರಸಭೆಗೆ ಎಚ್ಚರಿಸಬೇಕಿದೆ ಎಂದು ಹೇಳಿದರು.

ಬಾಪನಯ್ಯ ದೊಡ್ಡಿ ಭೂ ಸ್ವಾಧೀನ ರದ್ದಾಗುತ್ತದೆ ಎಂದು ಕಂದಾಯ ಇಲಾಖೆ, ಸಹಾಯಕ ಆಯುಕ್ತರ ಕಚೇರಿ ಅಧಿಕಾರಿಗಳು 7-8 ಬಾರಿ ಪತ್ರ ಬರೆದು, ಕೊನೆಗೆ ಖುದ್ದಾಗಿ ನಗರಸಭೆಗೆ ಬಂದು ಗಮನ ಸೆಳೆದರೂ ನಗರಸಭೆ ಈ ದಿಶೆಯಲ್ಲಿ ಕ್ರಮ ವಹಿಸಲಿಲ್ಲ. ಬದಲಾಗಿ ಬೇಜವಾಬ್ದಾರಿವಹಿಸಿದ್ದರಿಂದ ಭೂಸ್ವಾಧೀನ ರದ್ದಾಗಿದೆ ಎಂದು ಧರಣಿ ನಿರತರು, ಸಂಘಟನೆ ಪ್ರತಿನಿಧಿಗಳು ಆರೋಪ ಮಾಡಿದರು.

ನಗರಸಭೆ ಸದಸ್ಯ ಯಲ್ಲಪ್ಪ, ಮಾಜಿ ಸದಸ್ಯ ಜೆ ತಿಮ್ಮಪ್ಪ, ರೆಡ್ಡಿ ವಕೀಲ, ಜನಾರ್ದನ ಹಳ್ಳಿಬೆಂಚಿ, ಎನ್.ಎಂ ಮೈತ್ರಿಕರ್, ತಾಯಣ್ಣ ಹೊಸೂರು, ಚಂದ್ರಶೇಖರ, ಶಾಂತಕುಮಾರ, ನಾಗರಾಜ, ಸಿ.ಎಂ ವಿರೇಶ, ನರಸಿಂಹಲು, ನರೇಂದ್ರ ಭಂಡಾರಿ, ಆರ್. ವೀರೇಶ, ಜೆ ಕೆಂಚಪ್ಪ, ಜಂಬಯ್ಯ, ಮಾರೆಪ್ಪ ಸೇರಿದಂತೆ ಅನೇಕರಿದ್ದರು.

ಅಧ್ಯಕ್ಷರ ಭರವಸೆ ಧರಣಿ ವಾಪಸ್: ಜಾಗೆ ಮಾಲೀಕರ ಜತೆ ಶುಕ್ರವಾರ ನಗರಸಭೆಯು ಸಭೆ ನಡೆಸಿ ಒಪ್ಪಂದದ ಮೂಲಕ ಜಾಗೆ ಪಡೆಯುವ ದಿಶೆಯಲ್ಲಿ ಕ್ರಮ ಕೈಗೊಳ್ಳಲಾಗುವುದ ಎಂಬ ಭರವಸೆಯನ್ನು ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ ಹಾಗೂ ಹಿರಿಯ ಸದಸ್ಯ ಜಯಣ್ಣ ಅವರು ನೀಡಿದ ಹಿನ್ನೆಲೆಯಲ್ಲಿ ಧರಣಿ ವಾಪಸ್ ಪಡೆಯಲಾಗಿದೆ ಎಂದು ನವರತ್ನ ಯುವಕ ಸಂಘದ ಮುಖಂಡ ಕೆ.ಪಿ ಅನಿಲಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.