ADVERTISEMENT

ರೈತರಲ್ಲಿ ಸಂತಸ ತಂದ ಮೃಗಶಿರ ಮಳೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 9:04 IST
Last Updated 9 ಜೂನ್ 2018, 9:04 IST
ಮೃಗಶಿರ ಮಳೆ ಅರ್ಭಟಕ್ಕೆ ಶುಕ್ರವಾರ ಲಿಂಗಸುಗೂರು ಪಟ್ಟಣದ ಮುಖ್ಯ ರಸ್ತೆ ಜಲಾವೃತಗೊಂಡಿರುವುದು.
ಮೃಗಶಿರ ಮಳೆ ಅರ್ಭಟಕ್ಕೆ ಶುಕ್ರವಾರ ಲಿಂಗಸುಗೂರು ಪಟ್ಟಣದ ಮುಖ್ಯ ರಸ್ತೆ ಜಲಾವೃತಗೊಂಡಿರುವುದು.   

ಲಿಂಗಸುಗೂರು: ಬೇಸಿಗೆ ಸುಡುಬಿಸಿಲಿಗೆ ತತ್ತರಿಸಿದ್ದ ರೈತರು ಕಳೆದ ವಾರ ಬಿದ್ದ ಅಲ್ಪಸ್ವಲ್ಪ ಮಳೆಗೆ ಕೃಷಿ ಚಟುವಟಿಕೆ ನಡೆಸಿದ್ದರು. ಶುಕ್ರವಾರ ತಾಲ್ಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ರೈತ ಸಮೂಹ ಹರ್ಷಗೊಂಡಿದ್ದು ಬಿತ್ತನೆ ಬೀಜ, ಕೂರಿಗೆ ಹಾಯಿಸುವ ಕಾರ್ಯದಲ್ಲಿ ಮಗ್ನರಾಗಿದ್ದು ಕಂಡು ಬಂದಿತು.

ಶುಕ್ರವಾರ ಬೆಳಿಗ್ಗೆಯಿಂದ ಧಾರಾಕಾರ ಮಳೆ ಬಿದ್ದಿದ್ದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ಕೆಲ ವಾರ್ಡ್‌ಗಳಲ್ಲಿ ನೀರು ಹರಿದು ಹೋಗಲು ಅನುಕೂಲ ಇಲ್ಲದೆ ಹೋಗಿದ್ದರಿಂದ ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಾಹನ ಸವಾರರು, ಶಾಲಾ ಮಕ್ಕಳು ನೀರಿನಲ್ಲಿಯೆ ನಡೆದು ಮನೆ ಸೇರಿಕೊಂಡ ಚಿತ್ರಣ ಸಾಮಾನ್ಯವಾಗಿತ್ತು.

ಈಗಾಗಲೆ ಭೂಮಿ ಸಿದ್ಧತೆ ಮಾಡಿಕೊಂಡ ರೈತರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತಿದ್ದಂತೆ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಅಂಗಡಿಗಳಲ್ಲಿ ಅವಶ್ಯಕತೆ ಆಧಾರಿತ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಲು ನೂಕು ನುಗ್ಗಲು ನಡೆದಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನತೆಗೆ ಮೃಗಶಿರ ಮಳೆ ಪ್ರವೇಶದಿಂದ ತಂಪಾದ ವಾತಾವರಣ ಮುಂದುವರೆದಿದೆ.

ADVERTISEMENT

ಕೃಷಿ ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರಿ) ಮಲ್ಲಿಕಾರ್ಜುನ ಅವರನ್ನು ಸಂಪರ್ಕಿಸಿದಾಗ ‘ಮೃಗಶಿರ ಮಳೆ ಚೆನ್ನಾಗಿ ಬಿದ್ದಿದೆ. ರೈತರು ಬಿತ್ತನೆಗೆ ಅಗತ್ಯ ಮುಂಜಾಗ್ರತ ಸಿದ್ಧತೆ ಮಾಡಿಕೊಂಡಿದ್ದು ಕೃಷಿ ಇಲಾಖೆ ಕೂಡ ಬಿತ್ತನೆ ಬೀಜ ಸಂಗ್ರಹಿಸಿಕೊಂಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.