ADVERTISEMENT

ರೋಗಿಗಳ ನಿರ್ಲಕ್ಷ್ಯ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಮೇ 2018, 12:47 IST
Last Updated 6 ಮೇ 2018, 12:47 IST

ಸಿಂಧನೂರು: ‘ಹಲವು ಕಾಯಿಲೆಗಳಿಂದ ಬಳಲುವ ರೋಗಿಗಳು ಚಿಕಿತ್ಸೆಗೆಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಬಂದರೆ ಇಲ್ಲಿಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಿನಿಂದ ತಮ್ಮನ್ನು ನೋಡಲು ವೈದ್ಯರೇ ಬಂದಿಲ್ಲ. ಅಸ್ತಮಾ ರೋಗದಿಂದ ಬಳಲುತ್ತಿದ್ದೇನೆ ಎಂದು ಹುಲಗಪ್ಪ ದಢೇಸುಗೂರು ಹೇಳಿದರೆ, ವಾಂತಿ ಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿರುವ ನನಗೆ ಗ್ಲುಕೋಸ್ ಬಾಟಲಿ ಹಚ್ಚಿ ಹೋದವರು ಮರಳಿ ಬರಲಿಲ್ಲ. ಅಕ್ಕಪಕ್ಕದಲ್ಲಿರುವ ಜನರೇ ಡ್ರಿಪ್‌ ಅನ್ನು ತೆಗೆದು ಉಪಕಾರ ಮಾಡಿದರು ಎಂದು ಯಲ್ಲಮ್ಮ ಎನ್ನುವ ಮಹಿಳೆ ಬೇಸರ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಬರುವುದಿಲ್ಲ. ಬಂದರೂ ರೋಗಿಗಳನ್ನು ಸರಿಯಾಗಿ ತಪಾಸಣೆ ಮಾಡುವುದಿಲ್ಲ. ಕಾಟಾಚಾರಕ್ಕೆಂಬಂತೆ ತಪಾಸಣೆ ಮಾಡಿ, ಮಾತ್ರೆ ಮತ್ತು ಔಷಧಿಗಳನ್ನು ಹೊರಗಡೆ ಚೀಟಿ ಬರೆದು ಕೊಡುತ್ತಿದ್ದಾರೆ. ಇಷ್ಟಲ್ಲದೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಎಂಬುದು ಮಾಯವಾಗಿದೆ. ಕುಡಿಯಲು ನೀರಿಲ್ಲ, ಶೌಚಾಲಯ ಇಲ್ಲ ಅಮರಾಪುರ ಗ್ರಾಮದ ಮಲ್ಲಪ್ಪ ದೂರಿದರು.

ADVERTISEMENT

ರಮೇಶ ಎನ್ನುವ ಹಾಸ್ಟೆಲ್ ವಿದ್ಯಾರ್ಥಿ ಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿ ಜ್ವರ ಬಂದ ಕಾರಣ ಆಸ್ಪತ್ರೆಗೆ ಬಂದು ದಾಖಲಾಗಿದ್ದಾನೆ. ಬೆಳಗಿನಿಂದ ಸಂಜೆಯಾದರೂ ಆತನನ್ನು ಒಬ್ಬರೂ ಬಂದು ನೋಡಿಲ್ಲವೆಂದು ಸಿಐಟಿಯು ಮುಖಂಡರಾದ ಯಂಕಪ್ಪ ಕೆಂಗಲ್, ಮುರ್ತುಜಾಸಾಬ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.