ADVERTISEMENT

ಲಾರಿ ಅಪಘಾತ: ಅನ್ನಭಾಗ್ಯ ಅಕ್ಕಿ ನಾಪತ್ತೆ?

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 6:21 IST
Last Updated 25 ಸೆಪ್ಟೆಂಬರ್ 2013, 6:21 IST

ಲಿಂಗಸುಗೂರು: ಪಟ್ಟಣದ ಹೊರ­ವಲಯದ ಕೆಪಿಟಿಸಿಎಲ್‌ ವಸತಿ ಗೃಹದ ಬಳಿ ರೋಡಲಬಂಡ ರಸ್ತೆಯಲ್ಲಿ ಸೋಮ­ವಾರ ರಾತ್ರಿ ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿ ಮಗುಚಿ ಬಿದ್ದ ಲಾರಿಯಲ್ಲಿದ್ದ ರಾಜ್ಯ ಸರ್ಕಾರದ ಕೆಎಫ್‌ಸಿಎಸ್‌ಸಿ ಗೆ ಸಂಬಂಧಿಸಿದ 500ಕ್ಕೂ ಹೆಚ್ಚು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ ಚೀಲ ರಾತ್ರೋ ರಾತ್ರಿ ನಾಪತ್ತೆಯಾಗಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

ಸೋಮವಾರ ರಾತ್ರಿ ಸಂಭವಿಸಿದ ಲಾರಿ ಅಪಘಾತದಲ್ಲಿ ಲಾರಿ ಕಾ್ಯಬಿನ್‌­ನಲ್ಲಿ ಸಿಕ್ಕು ಹಾಕಿಕೊಂಡಿದ್ದ ಲಾರಿ ಕ್ಲೀನರ್‌ ಮೌಲಾಸಾಬ ಶಾಮೀದಸಾಬ ತೀವ್ರ­ಗಾಯಗೊಂಡ ಸ್ಥಿತಿಯಲ್ಲಿದ್ದಾಗ ಸಾರ್ವ­ಜನಿಕರ ಸಹಕಾರದಿಂದ ಫೋಕಲೈನ್‌ ಬಳಸಿ ಜೀವ ರಕ್ಷಣೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕ್ಲೀನರ್‌ ಮಾನ್ವಿಯಿಂದ ಮಹಾರಾಷ್ಟ್ರಕ್ಕೆ ಅಕ್ಕಿ ಸಾಗಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ ಎಂದು  ಪ್ರತ್ಯಕ್ಷದರ್ಶಿ­ಗಳು ತಿಳಿಸಿದರು.

ಮಾನ್ವಿಯಿಂದ ಅಕ್ಕಿ ಲೋಡ್‌ ಮಾಡಿಕೊಂಡು ವಿಜಾಪುರ ಜಿಲ್ಲೆ ಬಸವನಬಾಗೇವಾಡಿಗೆ ತೆರಳುವಾಗ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳ­ಲಾಗಿದೆ. ಪ್ರಥಮ ವರ್ತಮಾನ ವರದಿಯಲ್ಲಿ ಮಾನ್ವಿ ಯಾವ ಗೋದಾಮು, ಯಾವ ಕಂಪೆನಿಗೆ ಸಂಬಂಧಿ­ಸಿದ್ದು, ಎಲ್ಲಿಗೆ ಯಾವ ಉದ್ದೇಶಕ್ಕೆ ಒಯ್ಯಲಾಗುತ್ತಿತ್ತು ಎಂಬಿ­ತಾ್ಯದಿ ಸ್ಪಷ್ಟ ಮಾಹಿತಿ ಹಾಗೂ ದಾಖಲೆಗಳು ಇರದೇ ಇರುವುದು ಹಲವು ಅನುಮಾನಗಳಿಗೆ ಕಾರಣ­ವಾಗಿದೆ.

ಈ ಕುರಿತಂತೆ ಪೊಲೀಸ್‌ ಮೂಲಗಳಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿದ್ದು,  ಅನ್ನಭಾಗ್ಯ ಯೋಜನೆ ಅಕ್ಕಿ ಕಾಳಸಂತೆಗೆ ಮಾರಾಟ ಮಾಡಲು ಪರೋಕ್ಷವಾಗಿ ಬೆಂಬಿಸುವ ಲಕ್ಷಣಗಳು ಮೇಲ್ನೊಟಕ್ಕೆ ಕಂಡು ಬಂದಿದ್ದು ನಾಳೆ ಈ ಕುರಿತಂತೆ ಸಂಬಂಧಿಸಿದ ಆಯುಕ್ತರಿಗೆ ಮತ್ತು ಸಚಿವರಿಗೆ ದೂರು ನೀಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.