ADVERTISEMENT

ಶಾಸಕರ ಪಾದಯಾತ್ರೆ: ಬೋಸರಾಜು ಟೀಕೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 5:11 IST
Last Updated 29 ನವೆಂಬರ್ 2017, 5:11 IST

ಶಕ್ತಿನಗರ: ವಿದ್ಯುತ್ ಪೂರೈಕೆಗಾಗಿ ನಡೆಸುತ್ತಿರುವ ಉಭಯ ಶಾಸಕರ ಪಾದಯಾತ್ರೆ ದೊಂಬರಾಟವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ತೀವ್ರವಾಗಿ ಟೀಕಿಸಿದರು.

ರಾಯಚೂರು ತಾಲ್ಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ತ್ರಿಫೇಸ್‌ ವಿದ್ಯುತ್ 12 ತಾಸು ಹಾಗೂ 1 ಫೇಸ್ ವಿದ್ಯುತ್ 24 ತಾಸು ಪೂರೈಕೆ ಮಾಡಿ ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಚಿಕ್ಕಸೂಗೂರಿನ ವೈಟಿಪಿಎಸ್ ಮಹಾ ದ್ವಾರದ ಆವರಣದಲ್ಲಿ ಮಂಗಳವಾರ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯುತ್ ಪೂರೈಕೆಯ ವಿಷಯವನ್ನು ಬಿಜೆಪಿ, ಜೆಡಿಎಸ್ ಪಕ್ಷಗಳು ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ. ಸುಳ್ಳು ಭರವಸೆಗಳನ್ನು ಜನರಿಗೆ ಹೇಳಿ, ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ADVERTISEMENT

ಆರ್‌ಟಿಪಿಎಸ್ , ವೈಟಿಪಿಎಸ್ ವಿದ್ಯುತ್ ಘಟಕಗಳ ಉತ್ಪಾದನೆಗಾಗಿ ಸಿಂಗೇರಣಿ ಕೋಲ್ ಲಿಂಕ್ ಕಂಪೆನಿ ಯಿಂದ 92 ಸಾವಿರ ಟನ್, ಮಹಾನದಿ ಕೋಲ್‌ ಲಿಂಕ್ ಕಂಪೆನಿಯಿಂದ 80 ಸಾವಿರ ಟನ್ ಕಲ್ಲಿದ್ದಲು ಪೂರೈಕೆಗಾಗಿ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಶೈಲಜಾನಾಥ, ಮುಖಂಡ ರಾಜಾ ರಾಯಪ್ಪ ನಾಯಕ ಮಾತನಾಡಿದರು.

ವೇದಿಕೆಯಲ್ಲಿ ಸಂಸದ ಬಿ.ವಿ.ನಾಯಕ, ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಮುಖಂಡರಾದ ಎಂ.ಎಂ.ಹಿಂಡಸ ಗೇರಿ, ಬಷೀರುದ್ದೀನ್, ಕೆ.ಕರಿಯಪ್ಪ, ಎಂ.ನರಸನಗೌಡ, ಬಸವರಾಜರೆಡ್ಡಿ, ಕೆ.ಶಾಂತಪ್ಪ, ನಿರ್ಮಾಲಬೆಣ್ಣೆ, ಶಶಿಕಲಾಭೀಮರಾಯ, ದದ್ದಲಬಸನಗೌಡ, ಬಸವಂತಪ್ಪ, ತಾಯಣ್ಣನಾಯಕ, ಜಿ.ಶಿವಮೂರ್ತಿ, ರುದ್ರಪ್ಪಅಂಗಡಿ, ದೇವಣ್ಣನಾಯಕ ಮತ್ತಿತ್ತರರು ಪಾಲ್ಗೊಂಡಿದ್ದರು.

ವೈಟಿಪಿಎಸ್ ಮಹಾದ್ವಾರದ ಬಳಿ ವಿಜಯೋತ್ಸವ: ಶಕ್ತಿನಗರದಲ್ಲಿ ಉಪ ಚುನಾವಣೆ ಇರುವುದರಿಂದ ಚುನಾವಣೆ ನೀತಿ ಸಂಹಿತೆ ಜಾರಿ ಇದೆ. ಆದ್ದರಿಂದ ಆರ್‌ಟಿಪಿಎಸ್‌ಗೆ ತೆರಳಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರಿಗೆ, ಕಾರ್ಯಕರ್ತರಿಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.