ADVERTISEMENT

ಶೌಚಾಲಯಗಳ ನಿರ್ಮಾಣಕ್ಕೆ ವಿಶೇಷ ಕಾಳಜಿ ವಹಿಸಿ: ಅಭಿರಾಂ

ಜಿಲ್ಲಾ ಪಂಚಾಯಿತಿಯಲ್ಲಿ ಪಂಚಾಯಿತಿ ನೋಡಲ್‌ ಅಧಿಕಾರಿಗಳ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 9:49 IST
Last Updated 5 ಅಕ್ಟೋಬರ್ 2017, 9:49 IST

ರಾಯಚೂರು: ಜಿಲ್ಲೆಯಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಗುರಿಯನ್ನು ಈ ವರ್ಷ ಪೂರ್ಣಗೊಳಿಸಬೇಕಿದ್ದು, ನೋಡಲ್‌ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಂ ಜಿ.ಶಂಕರ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಚ್ಚ ಭಾರತ ಮೀಷನ್ ಕುರಿತಾಗಿ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿದರು.

ತಿಂಗಳಿನ ಲೆಕ್ಕದಲ್ಲಿ ಹಂತಹಂತವಾಗಿ ಕೆಲಸ ಮುಗಿಸಬೇಕು. ನಿಯಮಗಳನ್ನು ಹೇಳಿಕೊಂಡು ಕಾಲಹರಣ ಮಾಡಬಾರದು. ಶೌಚಾಲಯ ನಿರ್ಮಾಣಕ್ಕೆ ಏನು ಅಗತ್ಯವಿದೆಯೋ ಅಷ್ಟೆಲ್ಲ ಪ್ರಯತ್ನ ಹಾಕಬೇಕು. ಫಲಾನುಭವಿಗಳಿಗೆ ಮನವರಿಕೆ ಮಾಡಿಕೊಟ್ಟು ಶೌಚಾಲಯ ನಿರ್ಮಾಣಕ್ಕೆ ಅಣಿಗೊಳಿಸಬೇಕು ಎಂದರು.

ADVERTISEMENT

ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಶೇ 99 ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಬೇಕು. ಕೆಲವೊಂದು ಸಂಘ-ಸಂಸ್ಥೆಗಳ ಸಹಕಾರ ಪಡೆದುಕೊಂಡು ಗುರಿ ತಲುಪಬೇಕು. ಬಯಲು ಬಹಿರ್ದೆಸೆ ಮುಕ್ತ ಗಾಂಧಿ ಪುರಸ್ಕಾರ ಪಡೆದ ಗ್ರಾಮ ಪಂಚಾಯಿತಿಗಳು ನವೆಂಬರ್ ಕೊನೆಯವರೆಗೆ ತಮ್ಮ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಬೇಕು. ಸರ್ಕಾರವು ಈ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದೆ. ಪುರಸ್ಕಾರ ನೀಡುವ ಪತ್ರದಲ್ಲೂ ಈ ಬಗ್ಗೆ ಉಲ್ಲೇಖಿಸಿದೆ ಎಂದು ತಿಳಿಸಿದರು.

ರಾಯಚೂರು ಜಿಲ್ಲೆಯ ಬೀಜನಗೇರಾ, ಬಿಚ್ಚಾಲಿ, ಸಿಂಧನೂರು ತಾಲ್ಲೂಕಿನ ಬಾದರ್ಲಿ ಬೂತನಾದಿನ್ನಿ, ಲಿಂಗಸುಗೂರು ತಾಲ್ಲೂಕಿನ ಪೈದೊಡ್ಡಿ, ನರಕಲದಿನಿ, ಮಾನ್ವಿ ತಾಲ್ಲೂಕಿನ ಹಿರೇಕೊಟ್ನಕಲ್, ಕಪಗಲ್, ಪೋತ್ನಾಳ್ ಗ್ರಾಮ ಪಂಚಾಯತಿಗಳು ಚೆನ್ನಾಗಿ ಕಾರ್ಯ ಮಾಡಿವೆ. ಎಲ್ಲ ಪಂಚಾಯಿತಿಗಳು ಮಾದರಿಯಾಗುವ ರೀತಿಯಲ್ಲಿ ನೋಡಲ್‌ ಅಧಿಕಾರಿಗಳು ಶ್ರಮವಹಿಸಬೇಕು ಎಂದು ಹೇಳಿದರು.

ಪ್ರತಿಯೊಂದು ಗ್ರಾಮದ ಸ್ವಚ್ಛತೆಯ ದೃಷ್ಟಿಯಿಂದ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಸ್ವಚ್ಚ ಭಾರತ ಮೀಷನ್ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಬಯಲಿನಲ್ಲಿ ಬಿದ್ದ ಮಲ;ರೋಗಕ್ಕೆ ಮೂಲ ಎಂಬುದು ಪ್ರತಿಯೊಬ್ಬರಿಗೆ ಮನವರಿಕೆ ಮಾಡಿ ಕೊಡುವ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳದ್ದಾಗಿದೆ. ಸ್ವಚ್ಚತೆಯನ್ನು ಕಾಪಾಡುವುದೇ ಸ್ವಚ್ಚ ಭಾರತ ಮಿಷನ್ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಗ್ರಾಮ ಸದೃಢವಾಗಿರಬೇಕಾದರೆ ಸಾರ್ವಜನಿಕರು ಆರೋಗ್ಯದಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ. ಇದಕ್ಕೆ ಉತ್ತಮ ಪರಿಸರ ಸುತ್ತಮುತ್ತಲಿನ ನೈರ್ಮಲ್ಯ ಕಾಪಾಡುವುದು ಬಹಳ ಮುಖ್ಯ. ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಬಳಸಬೇಕು. ಗ್ರಾಮಗಳನ್ನು ಬಯಲು ಮಲ ವಿಸರ್ಜನೆ ಮುಕ್ತ ಮಾಡಬೇಕು. ನಾವೆಲ್ಲರು ಸೇರಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸುವಲ್ಲಿ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಹ್ಮದ್ ಯೂಸುಫ್ ಇದ್ದರು. ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ನೋಡಲ್ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.