ADVERTISEMENT

ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

ಶಾಂತಿ, ನೆಮ್ಮದಿ, ಸಮೃದ್ಧಿಗೆ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 10:01 IST
Last Updated 17 ಜೂನ್ 2018, 10:01 IST

ಸಿಂಧನೂರು: ಈದ್ ಉಲ್ ಫಿತ್ರ್ ಹಬ್ಬವನ್ನು ಶನಿವಾರ ಮುಸ್ಲಿಮರು ಶ್ರದ್ದಾಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು.

ನಗರದ ಬಡಿಬೇಸ್, ಕಾಟಿಬೇಸ್, ಮಹಿಬೂಬಿಯಾ ಕಾಲೊನಿ, ಪ್ರಶಾಂತನಗರ, ಶರಣಬಸವೇಶ್ವರ ಕಾಲೊನಿ, ಎ.ಕೆ.ಗೋಪಾಲನಗರ, ಇಂದಿರಾನಗರ, ಆದರ್ಶಕಾಲೊನಿ, ನಟರಾಜ್‍ಕಾಲೊನಿ, ಗಂಗಾನಗರ ಸೇರಿದಂತೆ ಮತ್ತಿತರ ಬಡಾವಣೆಗಳಿಂದ  ಒಂದೆಡೆ ಸೇರಿದ ಎಲ್ಲರೂ ಶುಭ್ರ ಶ್ವೇತ ವಸ್ತ್ರಧಾರಿಗಳಾಗಿ ಬಪ್ಪೂರು ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿದರು. ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮೌಲಾನಾ ಜಾಫರಸಾಬ ಕುರಾನ ಪಠಣ ಮಾಡಿದರು. ಧಾರ್ಮಿಕ ಮೌಲ್ವಿ ನಾಸೀರಸಾಬ ಸಾಮೂಹಿಕ ಪ್ರಾರ್ಥನೆ ಮಾಡಿಸಿ, ಎಲ್ಲೆಡೆ ಶಾಂತಿ, ಸಹಬಾಳ್ವೆ, ಸಮೃದ್ದಿ ನೆಲೆಸಲಿ ಎಂದು ಹೇಳಿದರು. ನಂತರ ಪರಸ್ಪರ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ‘ದ್ವೇಷ ಮತ್ತು ಅಸೂಯೆ ಮನೋಭಾವ ತ್ಯಜಿಸಿ ಪ್ರೀತಿ ವಿಶ್ವಾಸದಿಂದ ಬಾಳುವ ಸಂದೇಶವನ್ನು ಈದ್‌ ಉಲ್‌ ಫಿತ್ರ್ ನೀಡುತ್ತದೆ’ ಎಂದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ, ಕೆಪಿಸಿಸಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಕರಿಯಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ಬಾಬುಗೌಡ ಬಾದರ್ಲಿ, ಮಾಜಿ ಸದಸ್ಯ ಚಂದೂಸಾಬ ಮುಳ್ಳೂರು, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ, ಉಪಾಧ್ಯಕ್ಷ ಮೋಯಿನುದ್ದೀನ್ ಖಾದ್ರಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ ಮತ್ತು ಪ್ರಮುಖರು ಇದ್ದರು.

ತಾಲ್ಲೂಕಿನ ಜವಳಗೇರಾ, ಸಾಲ ಗುಂದಾ, ತುರ್ವಿಹಾಳ, ಆಯ ನೂರು, ಮುಕ್ಕುಂದಾ, ಅಬಲ ನೂರು, ಹುಡಾ, ಬಳಗಾನೂರು, ದಢೇಸುಗೂರಿನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.