ADVERTISEMENT

ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 9:50 IST
Last Updated 21 ಜೂನ್ 2011, 9:50 IST
ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಕಚೇರಿಗೆ ಮುತ್ತಿಗೆ
ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಕಚೇರಿಗೆ ಮುತ್ತಿಗೆ   

ಲಿಂಗಸುಗೂರ: ತಾಲ್ಲೂಕಿನ ಕಸಬಾಲಿಂಗಸುಗೂರಿನಲ್ಲಿರುವ ಶತಮಾನಗಳಷ್ಟು ಹಳೆಯದಾದ ಕ್ಯಾಪ್ಟನ್ ಮನ್ ಬಾವಿ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಹತ್ತು ಹಲವು ಬಾರಿ ಪುರಸಭೆ ಆಡಳಿತ ಮಂಡಳಿ ಗಮನಕ್ಕೆ ತರಲಾಗಿದೆ.

ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಆಡಳಿತ ಮಂಡಳಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸೋಮವಾರ ಕಸಬಾಲಿಂಗಸುಗೂರಿನ ವಾರ್ಡ್ 23ರ ನಾಗರಿಕರು ತಹಸೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಶತಮಾನಗಳಷ್ಟು ಹಳೆಯ ಬಾವಿ ವಾರ್ಡ್ ನಾಗರಿಕರ ಜೀವಾಳವಾಗಿದೆ. ಪುರಸಭೆ ಸಮರ್ಪಕ ನೀರು ಪೂರೈಸದಿರುವುದರಿಂದ ಈ ಬಾವಿಯ ನೀರನ್ನೆ ಬಳಸಲಾಗುತ್ತಿದೆ. ಬಾವಿಯ ಸುತ್ತಮುತ್ತಲಿನ ಕಟ್ಟಡದ ಒಳಮೈ ಕುಸಿತಗೊಂಡಿದೆ. ಇಕ್ಕಟ್ಟಾದ ಬಯಲಿನಲ್ಲಿರುವ ಬಾವಿಯ ಕಟ್ಟಡದ ಮೇಲ್ಭಾಗದಲ್ಲಿ ನಡೆದಾಡುವುದು ಅನಿವಾರ್ಯ. ಸಂಪೂರ್ಣ ದುಸ್ಥಿತಿಗೆ ತಲುಪಿರುವ ಬಾವಿ ದುರಸ್ತಿಗೆ ನಗರಾಭಿವೃದ್ಧಿ ಇಲಾಖೆ ಕೂಡ ಆದೇಶ ಮಾಡಿದರು ಪುರಸಭೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಹಿಂದೆ ಮನ್ ಬಾವಿ ದುರಸ್ತಿಗೆ ರೂ. 6 ಲಕ್ಷ ನಿಯೋಜಿಸಲಾಗಿತ್ತು. ಸದರಿ ಹಣ ಇನ್ನ್ಯಾವ ಕೆಲಸಕ್ಕೆ ಬಳಸಿದ್ದಾರೋ ತಿಳಿಯುತ್ತಿಲ್ಲ. ಮೀಸಲಿಟ್ಟ ಹಣ ದುರ್ಬಳಕೆ ಮಾಡಿಕೊಂಡಿರುವುದು ದಾಖಲೆಗಳಿಂದ ತಿಳಿದು ಬರುತ್ತದೆ. ಅಲ್ಲದೆ ವಾರ್ಡ್‌ನ ಅಭಿವೃದ್ಧಿ ಕೆಲಸಗಳಿಗೆ ಮನ್ನಣೆ ನೀಡುತ್ತಿಲ್ಲ. ಚರಂಡಿ, ಸಮರ್ಪಕ ಕುಡಿಯುವ ನೀರು, ಬೀದಿದೀಪ, ಸ್ವಚ್ಛತೆ ಬಗ್ಗೆ ಸಂಪೂರ್ಣ ಕಡೆಗಣಿಸಲಾಗಿದೆ. ಸಮಸ್ಯೆಗಳ ಕುರಿತು ಆಡಳಿತ ಮಂಡಳಿ ಜೊತೆ ಮಾತನಾಡಲು ನಾಚಿಕೆ ಪಡುವಂತಾಗಿದೆ ಎಂದು ದೂರಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಮಾಲೀಕರು ಹೇಳಿದ ಸಮಯ, ದಿನವೆ ಅಂತಿಮವಾಗಿದೆ. ತಿಂಗಳಲ್ಲಿ ಒಂದೆರಡು ದಿನ ಮಾತ್ರ ತೆರೆಯಲಾಗುತ್ತಿದೆ. ಉಳಿದ ದಿನ ಅಂಗಡಿಗೆ ಹೋದರೆ ಪಡಿತರ ಹಂಚುತ್ತಿಲ್ಲ. ಅಲ್ಲದೆ, ಬೇರೆ ನ್ಯಾಯಬೆಲೆ ಅಂಗಡಿಗೆ ಇದ್ದ ಪಡಿತರ ಕಾರ್ಡ್‌ಗಳನ್ನು ಹನುಮಂತಪ್ಪ ವಡ್ಡರ ಅವರ ನ್ಯಾಯಬೆಲೆ ಅಂಗಡಿಗೆ ವರ್ಗಾವಣೆ ಮಾಡಿದ್ದರಿಂದ ತುಂಬಾ ತೊಂದರೆ ಎದುರಿಸುವಂತಾಗಿದೆ. ಕಾರಣ ಮೇಲಿನ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ದೊರಕಿಸುವಂತೆ ನಾಗರಿಕರು ಮನವಿ ಮಾಡಿಕೊಂಡರು.

ವಾರ್ಡ್‌ನ ಪುರಸಭೆ ಸದಸ್ಯ ಕುಪ್ಪಣ್ಣ ಮುಂಡರಗಿ, ಮುಖಂಡರಾದ ವಿಶ್ವನಾಥ, ಶಾಂತವೀರಯ್ಯಸ್ವಾಮಿ, ಶರಣಪ್ಪ, ಅಮರೇಶ, ಅಯ್ಯನಗೌಡ, ಲಿಂಗಪ್ಪ, ಗುಂಡಪ್ಪ, ಹುಸೇನಸಾಬ, ಸಂಗಯ್ಯ, ಅಡಿವೆಪ್ಪ, ಬಸಲಿಂಗಪ್ಪ, ಮಲ್ಲಪ್ಪ, ಮುತ್ತಪ್ಪ, ಹಾಜಿಸಾಬ, ದಾವಲಸಾಬ, ಬಾಬಾಸಾಬ, ಖಾಜಾಸಾಬ, ಮಹಿಬೂಬಸಾಬ, ಶಿವಮೂರ್ತೆಮ್ಮ, ಕುಪ್ಪಣ್ಣ, ಅಮರಪ್ಪ, ಶಿವರಾಜ, ಬಸಪ್ಪ, ಶಿವಶಂಕರರೆಡ್ಡಿ, ವಿರೇಶ, ಚಂದ್ರಶೇಖರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.