ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ಮಾನ್ವಿ ಸಜ್ಜು

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 9:25 IST
Last Updated 8 ಜೂನ್ 2013, 9:25 IST

ಮಾನ್ವಿ: ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆಗಳ ಹಿನ್ನಲೆಯಲ್ಲಿ ಸತತವಾಗಿ ಮುಂದೂಡಲ್ಪಟ್ಟಿದ್ದ ಮಾನ್ವಿ ತಾಲ್ಲೂಕು ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ಜೂನ್ 8 ರಂದು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 

ಸಮ್ಮೇಳನಾಧ್ಯಕ್ಷರಾಗಿ ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹಾಗೂ ತಾಲ್ಲೂಕಿನ ಉಮಳಿಹೊಸೂರು ಗ್ರಾಮದವರಾದ ಎಚ್.ಪಂಪಯ್ಯ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಹಲವು ದಶಕಗಳಿಂದ ಸಾಹಿತ್ಯಿಕ ಸಂಘಟನೆಗೆ ಹೆಸರಾದ ಎಚ್.ಪಂಪಯ್ಯ ಶೆಟ್ಟಿ ಅವರು ಸಮ್ಮೇಳನದ ಅಧ್ಯಕ್ಷರಾಗಿರುವುದು ಸ್ಥಳೀಯ ಬರಹಗಾರರು ಹಾಗೂ ಸಂಘಟಕರಲ್ಲಿ ಸಮ್ಮೇಳನ  ಯಶಸ್ಸುಗೊಳಿಸುವ ಹುಮ್ಮಸ್ಸು ಮೂಡಿಸಿದೆ.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಎನ್.ಎಸ್.ಬೋಸರಾಜು ಹಾಗೂ ಕಾರ್ಯಾಧ್ಯಕ್ಷರಾದ ಶಾಸಕ ಜಿ.ಹಂಪಯ್ಯ ನಾಯಕ ಮತ್ತಿತರರು ಶುಕ್ರವಾರ ಸಮ್ಮೇಳನದ ಸ್ಥಳ ವಾಸವಿ ಕಲ್ಯಾಣಮಂಟಪಕ್ಕೆ ತೆರಳಿ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತಾಯಪ್ಪ ಬಿ.ಹೊಸೂರು ಸಮ್ಮೇಳನದ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಕಾಂಗ್ರೆಸ್ ಮುಖಂಡರಾದ ಎಚ್.ಹುಸೇನ್‌ಪಾಷ, ಎ.ಬಾಲಸ್ವಾಮಿ ಕೊಡ್ಲಿ, ಗಫೂರ ಸಾಬ್, ಆರ್.ಮುತ್ತುರಾಜ ಶೆಟ್ಟಿ, ಶಿವಯ್ಯ ಶೆಟ್ಟಿ, ಮನ್ಸಾಲಿ ವೆಂಕಯ್ಯ ಶೆಟ್ಟಿ,  ಜಿ.ನಾಗರಾಜ, ಜೆ.ಸುಧಾಕರ, ಜಾಕೀರ್ ಮೋಹಿನುದ್ದೀನ್, ವೀರನಗೌಡ ಗವಿಗಟ್, ರವಿಕುಮಾರ,  ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶ್ರೀಶೈಲಗೌಡ, ಮೂಕಪ್ಪ ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT