ADVERTISEMENT

ಸಿಇಟಿ ಕಾಯಿದೆ 2006: ಎಬಿವಿಪಿ ರ್‍್ಯಾಲಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 6:48 IST
Last Updated 21 ಡಿಸೆಂಬರ್ 2013, 6:48 IST

ರಾಯಚೂರು: ಸರ್ಕಾರ 2006ರ ಸಿಇಟಿ ಕಾಯ್ದೆ­ ಕೂಡಲೇ ವಾಪಸ್‌ ಪಡೆಯ­ಬೇಕು ಎಂದು  ಒತ್ತಾಯಿಸಿ ಅಖಿಲ ಭಾರ­ತೀಯ ವಿದ್ಯಾರ್ಥಿ ಪರಿ­ಷತ್‌ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ಪ್ರತಿಭ­ಟನಾ ರ್‍್ಯಾಲಿ ನಡೆಸಿದರು.

ಬೆಳಿಗ್ಗೆ ನಗರದ ಡಾ.ಬಿ.ಆರ್‌ ಅಂಬೇಡ್ಕರ್‌ ವೃತ್ತದವರೆಗೆ ಪ್ರತಿಭಟನೆ ರ್‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿ­ಯವರೆಗೆ  ಸರ್ಕಾರದ ಅಣಕು ಶವ­ಯಾತ್ರೆ ನಡೆಸಿ ನಂತರ,  ಜಿಲ್ಲಾಧಿ­ಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ­ದರು. ಬಡ ಪ್ರತಿಭಾವಂತ ವಿದ್ಯಾರ್ಥಿ­ಗಳು ವೃತ್ತಿ ಶಿಕ್ಷಣದಿಂದ ವಂಚಿತ­ರನ್ನಾಗಿಸುವ ಹುನ್ನಾರದಿಂದ ರಾಜ್ಯ ಸರ್ಕಾರ 2006ರ ಕಾಯ್ದೆ ಜಾರಿಗೆ ಮುಂದಾಗಿದೆ. ಶಿಕ್ಷಣ ವಿರೋಧಿ ನೀತಿ ಯನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸುವ ಈ ನೀತಿ ವಿದ್ಯಾರ್ಥಿ ಹಾಗೂ ಶಿಕ್ಷಣಿಕ ಪ್ರಗತಿಗೆ ಮಾರಕವಾಗಿದೆ. ಬಡಕೂಲಿ ಕಾರ್ಮಿಕರ ಮಕ್ಕಳು ಭವಿಷ್ಯದಲ್ಲಿ ವೈದ್ಯರು, ಎಂಜಿನಿಯರ್ ಆಗಬೇಕು ಎಂಬ ಕನಸುಗಳಿಗೆ ಕೊಡಲಿ ಪಟ್ಟು ನೀಡುವಂಥ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿದೆ ಎಂದು ಆರೋಪಿಸಿದರು.

ಸರ್ಕಾರಿ ಜಾರಿಯಿಂದಾಗಿ ಸರ್ಕಾರಿ ಕೋಟಾ ರದ್ದಾಗಲಿದ್ದು, ಇದರಿಂದ ಗ್ರಾಮೀಣ ಭಾಗದವರಿಗೆ ಸಮಸ್ಯೆಯಾಗಲಿದೆ. ಈ ಹಿಂದೆ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಲ್ಲಿ ಸೀಟು ಆಯ್ಕೆ ಮಾಡಿಕೊಳ್ಳಲು ಅವಕಾಶ ಇತ್ತು. ಆದರೆ, ಈಗ ಅದಕ್ಕೆ ಸಂಚಕಾರವನ್ನು ಸರ್ಕಾರ ತಂದಿದೆ ಎಂದು ಹೇಳಿದರು.

ಸರ್ಕಾರ ವೃತ್ತಿಶಿಕ್ಷಣ 2006ರ ಕಾಯ್ದೆಯನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಎಬಿವಿಪಿ ಜಿಲ್ಲಾ ಸಹ ಸಂಚಾಲಕ ವಿಜಯ ಸಾಧಿಕರ ಜಿಲ್ಲಾಧಿಕಾರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.