ADVERTISEMENT

ಸೆಂಟಿನಲ್ ಪ್ರಯೋಗಾಲಯಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 10:40 IST
Last Updated 6 ಮಾರ್ಚ್ 2011, 10:40 IST
ಸೆಂಟಿನಲ್ ಪ್ರಯೋಗಾಲಯಕ್ಕೆ ಕ್ರಮ
ಸೆಂಟಿನಲ್ ಪ್ರಯೋಗಾಲಯಕ್ಕೆ ಕ್ರಮ   

ಲಿಂಗಸುಗೂರ: ಡೆಂಗೆಜ್ವರಕ್ಕೆ ಸಂಬಂಧಿಸಿ ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೋಗದ ಲಕ್ಷಣ ಆಧರಿಸಿ ಸಂಶಯ ವ್ಯಕ್ತಪಡಿ ಸುವುದು ಸಾಮಾನ್ಯ ವಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಡೆಂಗೆಜ್ವರ ಪರೀಕ್ಷೆ ಕಿಟ್ ಆಧರಿಸಿ ವರದಿ ನೀಡಿರುವುದು ಸತ್ಯ. ಈ ಗೊಂದಲ ನಿವಾರಣೆಗೆ ತಾಲ್ಲೂಕು ಕೇಂದ್ರದಲ್ಲಿ ‘ಸೆಂಟಿನಲ್ ಪ್ರಯೋಗಾಲ’ಯ ಆರಂಭಕ್ಕೆ ಕ್ರಮ ಕೈಕೊಳ್ಳಲಾಗು ವುದು ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ನರಸಿಂಹಲು ಹೇಳಿದರು.

ಶನಿವಾರ ಕರಡಕಲ್ಲ ಗ್ರಾಮದಲ್ಲಿ ಉಲ್ಬಣಗೊಂಡಿರುವ ಡೆಂಗೆಜ್ವರ ಪ್ರಕರಣದ ಪರಿಶೀಲನೆಗೆ ಆಗಮಿಸಿದ್ದ ಅವರು ಸಂಶಯಾಸ್ಪದ ಡೆಂಗೆಜ್ವರಕ್ಕೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡ ಮನೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಡೆಂಗೆಜ್ವರ ಪರೀಕ್ಷಿಸಲು ಕಿಟ್‌ಗಳನ್ನು ವಿತರಿಸಲು ಶೀಘ್ರದಲ್ಲಿಯೆ ಹಿರಿಯ ಅಧಿಕಾರಿಗಳ ಗಮನ ಸೆಳೆದು ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಸಂಶಯಾಸ್ಪದ ಡೆಂಗೆಜ್ವರ ಪ್ರಕರಣಗಳ ಕುರಿತು ಈಗಾಗಲೆ ಮಾಹಿತಿ ಬಂದಿತ್ತು. ಡೆಂಗೆಜ್ವರ ಹರಡುವ ಸೊಳ್ಳೆ ಪತ್ತೆಗೆ ಸಂಬಂಧಿಸಿ ಜಿಲ್ಲಾ ಸಹಾಯಕ ಕೀಟ ಶಾಸ್ತ್ರಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಂತಹ ಸೊಳ್ಳೆ ಪತ್ತೆಯಾಗಿಲ್ಲ. ಆದಾಗ್ಯೂ ಮುಂಜಾಗ್ರತೆ ಕುರಿತು ಕರಡಕಲ್ಲ ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಜಾಗೃತಿ ಸಭೆಗಳನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರು ಕೂಡ ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ಸ್ವೀಕರಿಸಿ ಸಹಕರಿಸುವಂತೆ ಮನವಿ ಮಾಡಿದರು.

ಪುರಸಭೆ ಕರಡಕಲ್ಲದಲ್ಲಿ ಸ್ವಚ್ಛತೆ ಮತ್ತು ಫಾಗಿಂಗ್ ಇತರೆ ಮುಂಜಾಗ್ರತ ಕ್ರಮ ಕೈಕೊಳ್ಳುವಲ್ಲಿ ಮುಂದಾಗ ಬೇಕಿದೆ. ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಜಯಕುಮಾರ, ಜಿಲ್ಲಾ ಸಹಾಯಕ ಕೀಟ ಶಾಸ್ತ್ರಜ್ಞ ಪರಶುರಾಮ ನಾಯಕ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.