ADVERTISEMENT

ಹಕ್ಕುಪತ್ರ ನಿರ್ಲಕ್ಷ್ಯ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 4:30 IST
Last Updated 3 ಅಕ್ಟೋಬರ್ 2012, 4:30 IST

ಲಿಂಗಸುಗೂರ: ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಉಪ್ಪಳ ಮತ್ತು ಕೊಂತನೂರು(ಡಿ) ಗ್ರಾಮಗಳ ಹೆಚ್ಚುವರಿ ಜಮೀನು ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಕೆಲ ವರ್ಷಗಳಿಂದ ಹೋರಾಟ ಮಾಡುತ್ತ ಬರಲಾಗಿದೆ. ಕೊನೆಗೆ ರಾಜ್ಯಪಾಲರ ಕಚೇರಿಯಿಂದ ಸೂಚನಾ ಪತ್ರ ತಂದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸೊಪ್ಪು ಹಾಕುತ್ತಿಲ್ಲ ಎಂದು ಸಾಮಾಜಿ ಕಾರ್ಯಕರ್ತ ಸೂಗಪ್ಪ ಬೊಮ್ಮನಾಳ ಆರೋಪಿಸಿದ್ದಾರೆ.

ಮಂಗಳವಾರ ರಾಷ್ಟ್ರಪಿತ ಮಹಾತ್ಮಗಾಂಧಿ ಜನ್ಮದಿನದಂದು ಸ್ಥಳೀಯ ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ ಅವರು, ಉಪ್ಪಳ ಗ್ರಾಮದ ಸರ್ವೆ ನಂಬರ 163 ಮತ್ತು 164ರಲ್ಲಿ 17 ರೈತರು. ಕೊಂತನೂರು(ಡಿ) ಗ್ರಾಮದ ಸರ್ವೆ ನಂಬರ 78ರಲ್ಲಿ 5 ಜನ ರೈತರು ಕಳೆದ 23-24 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಸಿಂಧನೂರ ತಹಸೀಲ್ದಾರ ಮಾಹಿತಿಯೆ ಇಲ್ಲ ಎಂದು ಹೇಳಿಕೊಳ್ಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಸಹಾಯಕ ಆಯುಕ್ತರು, ಪ್ರಾದೇಶಿಕ ಆಯುಕ್ತರು, ಕಂದಾಯ ಸಚಿವರು ಸೇರಿದಂತೆ ರಾಜ್ಯದ ಕಂದಾಯ ಇಲಾಖೆಯ ಪ್ರತಿಯೊಂದು ಶ್ರೇಣಿಕೃತ ಅಧಿಕಾರಿಗಳ ಕಚೇರಿ ಅಲೆದು ಸಾಕಾಗಿ ಹೋಗಿದೆ. ಕೊನೆಗೆ ರಾಜ್ಯಪಾಲರಿಗೆ ಅಗತ್ಯ ದಾಖಲೆ ಸಮೇತ ದೂರು ನೀಡಲಾಗಿತ್ತು. ರಾಜ್ಯಪಾಲರ ಕಾರ್ಯದರ್ಶಿ ಸರ್ಕಾರದ ಆಧೀನ ಕಾರ್ಯದರ್ಶಿಗೆ ಪತ್ರ ಬರೆದು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಅರ್ಜಿದಾರರಿಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದರು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಪ್ರಾದೇಶಿಕ ಆಯುಕ್ತರು ಕೂಡ ಸಹಾಯಕ ಆಯುಕ್ತರು ಲಿಂಗಸುಗೂರ ಮತ್ತು ತಹಸೀಲ್ದಾರ ಸಿಂಧನೂರು ಅವರಿಗೆ ಅರ್ಜಿದಾರರ ದಾಖಲೆಗಳ ಪ್ರಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಅರ್ಜಿದಾರರಿಗೆ ತಕ್ಷಣವೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದರು ಕೂಡ ಯಾವೊಬ್ಬ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಂತೆಯೆ ತಮಗೆ ಸ್ಪಷ್ಟ ನ್ಯಾಯ ದೊರಕುವವರೆಗೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಧರಣಿ ನಿರತರು ಸ್ಪಷ್ಟಪಡಿಸಿದ್ದಾರೆ.

ಅನಿರ್ಧಿಷ್ಟ ಉಪವಾಸ ಧರಣಿಯಲ್ಲಿ ಮುಖಂಡರಾದ ಮುದಕಪ್ಪ ನಾಗರಬೆಂಚಿ, ಆದಪ್ಪ ಮೇದಾರ, ಅಲ್ಲಾಸಾಬ, ಹನುಮಂತಪ್ಪ, ಮಹಾದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.