ADVERTISEMENT

ಹಟ್ಟಿ ಗಣಿ ಕಾರ್ಮಿಕರಿಗೆ ಅನ್ಯಾಯ: ಎಐಟಿಯುಸಿ ಆರೋಪ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 9:26 IST
Last Updated 30 ಮಾರ್ಚ್ 2018, 9:26 IST

ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಟ್ರೇಡ್‌ ಯೂನಿಯನ್‌ ಸೆಂಟರ್‌ ಆಫ್‌ ಇಂಡಿಯಾ (ಟಿಯುಸಿಐ) ಮುಖಂಡರು ಮಾಡುತ್ತಿರುವ ವೇತನ ಒಪ್ಪಂದದಿಂದ ಗಣಿ ಕಾರ್ಮಿಕರಿಗೆ ಅನ್ಯಾಯವಾಗಲಿದೆ ಎಂದು ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಸೆಂಟರ್‌ ಆಫ್‌ ಇಂಡಿಯಾ(ಎಐಟಿಯುಸಿ) ಹಟ್ಟಿ ಘಟಕದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.

ಒಂದರಿಂದ 10 ವರ್ಷ ಸೇವಾ ಅವಧಿಯೊಳಗೆ ಬರುವ 1,600 ಕಾರ್ಮಿಕರು ವೇಟೇಜ್‌, ಇನ್‌ಕ್ರಿಮೆಂಟ್‌ ಇಲ್ಲದೇ ನಷ್ಟ ಅನುಭವಿಸಬೇಕು. ಕಾರ್ಮಿಕರು ಗಣಿಯಲ್ಲಿ 3 ಸಾವಿರ ಅಡಿ ಕೆಳಗೆ ಸುರಂಗಗಳಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ನ್ಯಾಯಯುತವಾಗಿ ಹೆಚ್ಚು ವೇತನ ಸಿಗಬೇಕು ಎಂಬ ಉದ್ದೇಶದಿಂದ ಈ ಹಿಂದೆ ಕಾರ್ಮಿಕ ಸಂಘದ ಆಡಳಿತದ ಚುಕ್ಕಾಣಿ ಹಿಡಿದ ಎಐಟಿಯುಸಿ ಸಂಘಟನೆ 2011ರ ವೇತನ ಒಪ್ಪಂದಲ್ಲಿ ಭೂ ಕೆಳಮೈ ಭತ್ಯೆಯನ್ನು ₹ 406 ದಿಂದ ₹ 1500ಕ್ಕೆ ಹೆಚ್ಚಿಸಿತ್ತು ಎಂದು ಹೇಳಿದಿದ್ದಾರೆ.

2016ರ ವೇತನ ಒಪ್ಪಂದಕ್ಕಾಗಿ ನಮ್ಮ ಸಂಘಟನೆ ಕಂಪನಿಗೆ ಸಲ್ಲಿಸಿದ ಬೇಡಿಕೆ ಪತ್ರದಲ್ಲಿ ಭೂ ಕೆಳಮೈ ಭತ್ಯೆಯನ್ನು ₹ 1500 ರಿಂದ ₹5000 ಕ್ಕೆ ಹೆಚ್ಚಿಸಲು ಬೇಡಿಕೆ ಇಡಲಾಗಿತ್ತು ಎಂದು ಹೇಳಿದ್ದಾರೆ.

ADVERTISEMENT

ಆದರೆ, ಈಗ ಕಾರ್ಮಿಕ ಸಂಘದ ಅಧಿಕಾರದ ಚುಕ್ಕಾಣಿ ಹಿಡಿದ ಟಿಯುಸಿಐ ನಾಯಕರು ಭೂ ಕೆಳಮೈ ಭತ್ಯೆ ಕೇವಲ ₹ 850 ಹೆಚ್ಚಿಸಲು ಒಪ್ಪಿದ್ದಾರೆ ಎಂದು ಎಐಟಿಯುಸಿ ಸಂಘಟನೆಯಿಂದ ಕಾರ್ಮಿಕ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡ ಸದಸ್ಯರಿಂದ ತಿಳಿದುಬಂದಿದೆ. ಇದರಿಂದ ಸುಮಾರು 2,330 ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಇದನ್ನು ಎಐಟಿಯುಸಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.