ADVERTISEMENT

ಹಣ ದುರ್ಬಳಕೆ ವಿರೋಧಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2012, 9:45 IST
Last Updated 24 ಜುಲೈ 2012, 9:45 IST
ಹಣ ದುರ್ಬಳಕೆ ವಿರೋಧಿಸಿ ಧರಣಿ
ಹಣ ದುರ್ಬಳಕೆ ವಿರೋಧಿಸಿ ಧರಣಿ   

ಮಾನ್ವಿ: ತಾಲ್ಲೂಕಿನ ಕಸನದೊಡ್ಡಿ ಗ್ರಾಮದಲ್ಲಿ ಕಳಪೆ ಮಟ್ಟದ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಿರ್ವಹಿಸಿ ಲಕ್ಷಾಂತರ ಹಣ ದುರ್ಬಳಕೆ ಮಾಡಿಕೊಂಡ ಎಂಜಿನಿಯರ್ ಅಮಾನತಿಗೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಎನ್ ಮೂರ್ತಿ ಬಣ)ಯ ನೇತೃತ್ವದಲ್ಲಿ ಪಂಚಾಯತ್‌ರಾಜ್ ಇಲಾಖೆಯ ಎಂಜಿನಿಯರ್ ಕಚೇರಿ ಆವರಣದಲ್ಲಿ ಖಾಲಿ ಕೊಡಗಳೊಂದಿಗೆ ಧರಣಿ ನಡೆಸಿದರು.

ತಾಲ್ಲೂಕಿನ ಹೀರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸನದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ತೀವ್ರಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ನೀರು ಪೂರೈಕೆ ಯೋಜನೆ ಅಡಿಯಲ್ಲಿ 18ಲಕ್ಷ ರೂಪಾಯಿ ಕಾಮಗಾರಿ ಮಂಜೂರಾಗಿತ್ತು. 

ಆದರೆ ಕಿರಿಯ ಎಂಜಿನಿಯರ್ ಕಿರಣಕುಮಾರ ಹಾಗೂ ಗುತ್ತಿಗೆದಾರರು ಶಾಮೀಲಾಗಿ ಕಳಪೆ ಮಟ್ಟದ ಪೈಪುಗಳನ್ನು ಹಾಕಿದ್ದಾರೆ. ಕಾಮಗಾರಿ ಮುಗಿದ ಒಂದು ವಾರದ ಒಳಗೆ ಎಲ್ಲಾ ಪೈಪುಗಳು ಒಡೆದು ಹೋಗಿವೆ. ಕಸನದೊಡ್ಡಿ ಗ್ರಾಮಕ್ಕೆ ನೀರು ತಲುಪದೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನಕಲಿ ಬಿಲ್ ಮೂಲಕ ಲಕ್ಷಾಂತರ ಅನುದಾನ ದುರ್ಬಳಕೆಗೆ ಕಾರಣರಾದ ಎಂಜಿನಿಯರ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಡಿ.ವಸಂತ ದೋತರಬಂಡಿ, ಕಾರ್ಯಾಧ್ಯಕ್ಷ ಮಾರೇಶ ಭಂಡಾರಿ ಬಲ್ಲಟಗಿ, ಪ್ರಧಾನ ಕಾರ್ಯದರ್ಶಿ ಎಮ್.ಮನೋಹರ, ಪದಾಧಿಕಾರಿಗಳಾದ ಬಿ.ಮಲ್ಲಪ್ಪ, ಮಾರೇಶ ತುಪ್ಪದೂರು, ಅಮರೇಶ ಮಲ್ಲಟ, ಶಾಂತಪ್ಪ ಸಿರವಾರ, ದುರುಗಪ್ಪ ಸಿರವಾರ, ಹುಸೇನಪ್ಪ, ನಾಗರಾಜ, ಆಂಜನೇಯ, ಮುದೆಪ್ಪ ಕಸನದೊಡ್ಡಿ, ಹನುಮಂತ ಕಸನದೊಡ್ಡಿ, ಪ್ರೇಮಕುಮಾರ ಕಸನದೊಡ್ಡಿ, ಕರೆಪ್ಪ, ಶೇಖರಪ್ಪ ಕಸನದೊಡ್ಡಿ, ಮಹಾಂತೇಶ ಕಸನದೊಡ್ಡಿ, ರಂಗಪ್ಪ ಕಸನದೊಡ್ಡಿ  ಧರಣಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.