ADVERTISEMENT

ಹರಿಜನವಾಡ: ತುರ್ತುಸೇವೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 9:57 IST
Last Updated 4 ಜೂನ್ 2013, 9:57 IST

ರಾಯಚೂರು: ಇಲ್ಲಿನ ಹರಿಜನವಾಡ ಬಡಾವಣೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ಗಂಟೆಗಳ ತುರ್ತು ಸೇವೆ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಜಾ ಸೇವಾ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಎಸ್. ಎನ್. ನಾಗರಾಜ ಅವರಿಗೆ ಮನವಿ ಸಲ್ಲಿಸಿದರು.

ಬಡಾವಣೆಯಲ್ಲಿ ಆರೋಗ್ಯ ಕೇಂದ್ರ ಇದ್ದರೂ ಯಾವುದೇ ಸೌಕರ್ಯಗಳು ಇರುವುದಿಲ್ಲ. ಹೆರಿಗೆ, ತುರ್ತು ಚಿಕಿತ್ಸೆಗೆ ಸಂಬಂಧಿಸಿದ ಸೌಲಭ್ಯ ಒದಗಿಸುವಂತೆ  ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಪಾದಿಸಿದರು.

ಈ ಬಡಾವಣೆಯಲ್ಲಿ ನಗರಸಭೆಯು ಶೇ 22.75ರ ಯೋಜನೆಯಡಿ ಸಮುದಾಯ ಭವನ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಸರ್ಕಾರ ಶೇ 22.75ಯೋಜನೆಯಲ್ಲಿ ಅನುದಾನ ಮಂಜೂರು ಮಾಡಿದರೂ ನಗರಸಭೆ ಅನುದಾನವನ್ನು ಬಳಕೆ ಮಾಡಿಲ್ಲ ಎಂದು ಆರೋಪಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರು ವೈದ್ಯರನ್ನು ನೇಮಕ ಮಾಡಬೇಕು. ಅಂಬ್ಯುಲೆನ್ಸ್ ವಾಹನದ ವ್ಯವಸ್ಥೆ ಮಾಡಬೇಕು. ಅರ್ಧಕ್ಕೆ ಸ್ಥಗಿತಗೊಂಡ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಬೇಕು.

ಗ್ರಂಥಾಲಯದ ವ್ಯವಸ್ಥೆ ಮಾಡಬೇಕು ಎಂದು ಸಮಿತಿ ಅಧ್ಯಕ್ಷ ಶ್ರೀಹರಿ ಜಗ್ಲಿ,  ಪ್ರಧಾನ ಕಾರ್ಯದರ್ಶಿ ಜೆ.ಮಾರೆಪ್ಪ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಪದಾಧಿಕಾರಿಗಳಾದ ಆರ್.ಉರುಕುಂದ, ಎಸ್.ರಾಜು, ಎ. ಉರುಕುಂದ, ಎಂ. ಹನುಮಂತಪ್ಪ ಹಾಗೂ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.