ಲಿಂಗಸುಗೂರ: ತಾಲ್ಲೂಕಿನ ಕಾಳಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಹೊಲದ ಬದುವಿನಲ್ಲಿ ಕಲ್ಲು ಹಾಕುವುದಕ್ಕೆ ಸಂಬಂಧಿಸಿ ವಾಗ್ವಾದ ನಡೆದಿತ್ತು.
ಆಗ ಗರ್ಭಿಣಿ ಶಾಂತಮ್ಮ ಸಣ್ಣಪ್ಪ ವಡ್ಡರ್ ಜಗಳ ಬಿಡಿಸಲು ಹೋದಾಗ ನೂಕು ನುಗ್ಗಲು ನಡೆದ ವೇಳೆಯಲ್ಲಿ ಗರ್ಭಪಾತ ಆಗಲಿ ಎಂಬ ಉದ್ದೇಶದಿಂದಲೆ ಆರೋಪಿತರು ಗರ್ಭಿಣಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
6ನೇ ತಿಂಗಳಿನಲ್ಲಿ ಮಹಿಳೆಗೆ ಗರ್ಭಪಾತವಾಗಿದ್ದು, ಹುಟ್ಟಿದ ಮಗು ಸಾವು ಬದುಕಿನ ಮಧ್ಯೆ ನರಳಾಡುತ್ತಿರುವುದು ವರದಿಯಾಗಿದೆ.
ಮಗು ಜೀವಂತವಾಗಿದ್ದು ತಾಯಿ ಮತ್ತು ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮಗುವನ್ನು ಬಾಗಲಕೋಟೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯುವಂತೆ ಡಾ. ದಿಗಂಬರ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ. ಆದರೆ, ಸೋಮವಾರ ಮಧ್ಯಾಹ್ನದವರೆಗೂ ಮಗು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿರುವುದು ಕಂಡು ಬಂದಿತು.
ಹಲ್ಲೆಗೊಳಗಾದ ಶಾಂತಮ್ಮ ನೀಡಿದ ದೂರಿನ ಮೇಲೆ ಮುಖ್ಯಪೇದೆ ದುರುಗಪ್ಪ ಒಟ್ಟು ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಹಿರಿಯ ಅಧಿಕಾರಿಗಳಿಗೆ ವಹಿಸಿಕೊಟ್ಟಿದ್ದಾರೆ. ಡಿವೈಎಸ್‌ಪಿ ಅನಿತಾ ಹದ್ದಣ್ಣವರ್, ಸಿಪಿಐ ಆರ್. ಪಂಚಾಕ್ಷರಯ್ಯ, ಪಿಎಸ್‌ಐ ಸಿದ್ಧರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.