ADVERTISEMENT

‘ಅಭಿವೃದ್ಧಿ ಆಗದಿದ್ದರೆ ಪ್ರತ್ಯೇಕ ರಾಜ್ಯ ಬೇಡಿಕೆ’

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2015, 6:56 IST
Last Updated 15 ಜೂನ್ 2015, 6:56 IST
ಕವಿತಾಳದ ಕಲ್ಮಠಕ್ಕೆ ಭಾನುವಾರ ಭೇಟಿ ನೀಡಿದ ಶಾಸಕ ಎ.ಎಸ್‌.ಪಾಟೀಲ್‌ ನಡಹಳ್ಳಿ ಅವರು  ಬವಸಲಿಂಗ ಸ್ವಾಮೀಜಿ ಜೊತೆ ಚರ್ಚಿಸಿದರು
ಕವಿತಾಳದ ಕಲ್ಮಠಕ್ಕೆ ಭಾನುವಾರ ಭೇಟಿ ನೀಡಿದ ಶಾಸಕ ಎ.ಎಸ್‌.ಪಾಟೀಲ್‌ ನಡಹಳ್ಳಿ ಅವರು ಬವಸಲಿಂಗ ಸ್ವಾಮೀಜಿ ಜೊತೆ ಚರ್ಚಿಸಿದರು   

ಕವಿತಾಳ: 1956–2015ರ ವರೆಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ತಾರತಮ್ಯ ನೀತಿ ಅನುಸರಿಸಿವೆ ಈ ಕುರಿತು ನಂಜುಂಡಪ್ಪ ವರದಿಯಲ್ಲಿ ಸ್ಪಷ್ಟ ಮಾಹಿತಿ ಇದೆ ಎಂದು ಶಾಸಕ ಎ.ಎಸ್‌.ಪಾಟೀಲ್‌ ನಡಹಳ್ಳಿ ಹೇಳಿದರು.

ಪಟ್ಟಣದ ಕಲ್ಮಠಕ್ಕೆ ಭಾನುವಾರ ಭೇಟಿ ನೀಡಿದ ಅವರು ಜೂ.26ರಂದು ಕವಿತಾಳಕ್ಕೆ ಬರುವ  ಜನ ಜಾಗೃತಿ ಜಾಥಾ ಕುರಿತು ಬಸವಲಿಂಗ ಸ್ವಾಮೀಜಿ ಜೊತೆ ಚರ್ಚಿಸಿ ನಂತರ ಮಾತನಾಡಿದರು.

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಬೇಕು ಎನ್ನುವುದು ನಮ್ಮ ಪ್ರಥಮ ಬೇಡಿಕೆ ಅದು ಈಡೇರದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಂದಾಜು 7,500 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ ಅದರ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ಈ ಭಾಗದ ಜಿಲ್ಲೆಗಳ ಜನರಿಗೆ ನೀಡುತ್ತಿರುವುದು ಕೇವಲ ಶೇ30ರಷ್ಟು ವಿದ್ಯುತ್‌ ಮಾತ್ರ ಉಳಿದ ವಿದ್ಯುತ್‌ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ನೀಡಲಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಅಂದಾಜು 600 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ ಆ ಜಿಲ್ಲೆಗೆ 24 ಗಂಟೆಗಳ ಕಾಲ ನಿರಂತರ ವಿದ್ಯುತ್‌ ಒದಗಿಸಲಾಗುತ್ತಿದೆ ಇದು ಸರ್ಕಾರಗಳ ತಾರತಮ್ಯ ನೀತಿಗೆ ಒಂದು  ಉದಾಹರಣೆ ಮಾತ್ರ ಎಂದರು.

ಕೃಷ್ಣಾ, ತುಂಗಭದ್ರ, ಘಟಪ್ರಭಾ ಮತ್ತು ಭೀಮಾ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಗೆ ಅಂದಾಜು 1056 ಟಿ.ಎಂ.ಸಿ. ನೀರು ಹಂಚಿಕೆಯಾಗಿದ್ದು ಸರ್ಕಾರಗಳು ಎಷ್ಟು ಪ್ರಮಾಣದ ನೀರನ್ನು ಸದ್ಬಳಕೆ ಮಾಡಿಕೊಂಡಿವೆ ಎಂದು ಸ್ಪಷ್ಟಪಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕರ್ನಾಟಕ ಏಕೀಕರಣದ ನಂತರ ಉತ್ತರ ಕರ್ನಾಟಕ ಮತ್ತು ರಾಜ್ಯದ ಉಳಿದ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳು ಖರ್ಚು ಮಾಡಿದ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಪ್ರಾದೇಶಿಕ ಅಸಮಾನತೆ ಕುರಿತು ಈ ಭಾಗದ ಜನರಲ್ಲಿ ಜಾಗೃತಿ ಮೂಡಿಸಲು 3ಸಾವಿರ ಕಲಾವಿದರ ತಂಡ ಜಾಗೃತಿ ಜಾಥಾ ನಡೆಸಲಿದ್ದು ಜೂ.24ರಂದು ಕವಿತಾಳಕ್ಕೆ ಬರಲಿದೆ ಮತ್ತು  28ರಂದು ರಾಯಚೂರಿನಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ತಾವು ನಡೆಸುತ್ತಿರುವ ಹೋರಾಟ ಯಾವುದೇ ವ್ಯಕ್ತಿ ಅಥವಾ ಸರ್ಕಾರದ ವಿರುದ್ಧ ಅಲ್ಲ 2008ರಿಂದ ಯಾವುದೇ ಅಧಿಕಾರ ಇಲ್ಲದಿದ್ದರೂ ಹೋರಾಟ ನಡೆಸಿದ್ದೇನೆ ಎಂದರು. ಮುಖಂಡರಾದ ರಜಾಕ್‌ ಉಸ್ತಾದ್, ಬಿ.ಎ.ಕರೀಂಸಾಬ್, ವಿಜಯಭಾಸ್ಕರ ಕೋಸ್ಗಿ, ಅಮರೇಶ ದಿನ್ನಿ, ಬಸಲಿಂಗಯ್ಯ, ನಾಗರಾಜ ಹೂಗಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.