ಶಹಾಪುರ: ‘ಕೆಜೆಪಿ ಪಕ್ಷವು ರಾಯಚೂರು ಲೋಕಸಭೆಯ ಅಭ್ಯರ್ಥಿ ಕೆ.ಶಿವಣ್ಣಗೌಡ ನಾಯಕ ಅವರಿಗೆ ಬಾಹ್ಯ ಬೆಂಬಲ ನೀಡಲಾಗವುದು. ಬಿಜೆಪಿ ಪಕ್ಷಕ್ಕೆ ಅಲ್ಲ’ ಎಂದು ಶಾಸಕ ಗುರು ಪಾಟೀಲ್ ಶಿರವಾಳ ಸ್ಪಷ್ಟಪಡಿಸಿದರು.
ಪಟ್ಟಣದ ಚರಬಸವೇಶ್ವರ ಗದ್ದುಗೆಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇದು ಕಾರ್ಯಕರ್ತರ ಒಮ್ಮತದ ನಿರ್ಧಾರವಾಗಿದೆ. ನಮಗೆ ವಿಷಯಾಧಾರಿತ ವ್ಯಕ್ತಿಗೆ ನಮ್ಮ ಪಕ್ಷವು ಬೆಂಬಲಿಸಲಿದೆ. ಬಿಜೆಪಿ ಪಕ್ಷಕ್ಕೆ ಅಲ್ಲ ಅನಾವಶ್ಯಕವಾಗಿ ಗೊಂದಲ ಉಂಟು ಮಾಡಿ ಬಿಜೆಪಿಯಲ್ಲಿ ಸೇರ್ಪಡೆ ಎಂಬುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಹಿಂದೆ ನಮ್ಮ ಕಾರ್ಯಕರ್ತರು ಬಿಜೆಪಿ ಪಕ್ಷದಲ್ಲಿದ್ದರು ಅವರ ನಿರ್ಧಾರದಂತೆ ಪಕ್ಷ ತೊರೆದು ಸ್ವತಂತ್ರವಾಗಿ ಪುರಸಭೆ ಚುನಾವಣೆ ಎದುರಿಸಿದೆವು. ನಂತರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಇತಿಹಾಸ ನಿರ್ಮಿಸಿದೆವು. ರಾಜಕೀಯ ಬದಲಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕೆಜೆಪಿ ಮುಖಂಡರು ಸೇರ್ಪಡೆಯಾದರು ನಾವು ಮಾತ್ರ ಕೆಜೆಪಿಯಲ್ಲಿ ಉಳಿದುಕೊಂಡಿದ್ದೇವೆ. ಕಾರ್ಯಕರ್ತರ ನಿರ್ಧಾರ ನಮ್ಮ ಅಂತಿಮ ನಿರ್ಧಾರವಾಗಿದೆ ಎಂದು ಹೇಳಿದರು.
ಕೆಜೆಪಿ ಪಕ್ಷದ ಮುಖಂಡರಾದ ಭೀಮಯ್ಯಗೌಡ ಕಟ್ಟಿಮನಿ, ಮಲ್ಲಣ್ಣ ಮಡ್ಡಿ ಸಾಹು, ಅಮಾತೆಪ್ಪ ಕಂದಕೂರ, ಡಾ.ಚಂದ್ರಶೇಖರ ಸುಬೇದಾರ, ರಾಮಚಂದ್ರ ಕಾಶಿರಾಜ, ತಾಹೇರಪಾಶ ಕೆಂಭಾವಿ, ಮೋನಯ್ಯ ಹೊಸ್ಮನಿ, ಪುರಸಭೆ ಸದಸ್ಯರಾದ ವಸಂತ ಸುರಪುರಕರ್, ಬಸವರಾಜ ಆನೇಗುಂದಿ, ದೊಡ್ಡ ಮಾನಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.