ADVERTISEMENT

‘ಕೆನರಾ ಬ್ಯಾಂಕ್‌ನಿಂದ ಸಮಾಜಮುಖಿ ಕಾರ್ಯ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 5:49 IST
Last Updated 16 ಡಿಸೆಂಬರ್ 2013, 5:49 IST

ಸಿಂಧನೂರು: ಕೆನರಾ ಬ್ಯಾಂಕ್‌ ಕೇವಲ ಹಣಕಾಸಿನ ವ್ಯವಹಾರ ಮಾಡುವ ಮೂಲಕ ಲಾಭ ಹಾನಿ ಚಿಂತಿಸದೇ, ಸಾಮಾಜಿಕ ನ್ಯಾಯದ ಪರಿಕಲ್ಪನೆ­ಯಿಟ್ಟುಕೊಂಡು ಸಮಾಜಮುಖಿ ಕಾರ್ಯ ಮಾಡುತ್ತಿದೆ ಎಂದು  ಗುಲ್ಬರ್ಗ ವಲಯದ ಜನರಲ್‌ ಮ್ಯಾನೇಜರ್‌ ಬಿ. ಕೃಷ್ಣರೆಡ್ಡಿ ಹೇಳಿದರು.

ನಗರದ ದುದ್ದುಪೂಡಿ ಮಹಿಳಾ ಕಾಲೇಜಿನಲ್ಲಿ ಸ್ಥಳೀಯ ಕೆನರಾ ಬ್ಯಾಂಕ್‌, ಕರ್ನಾಟಕ ಕ್ಯಾನ್ಸರ್‌ ಸೊಸೈಟಿ ಬೆಂಗಳೂರು, ದುದ್ದುಪೂಡಿ ಕಾಲೇಜು ಎನ್‌ಎಸ್‌ಎಸ್‌ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಕ್ಯಾನ್ಸರ್‌ನ್ನು ಪ್ರಾರಂಭದ ಹಂತದಲ್ಲಿ ಗುರುತಿಸುವ ಕಾರ್ಯ ಅಗತ್ಯ. ಬಡಜನರು ದೂರದ ಪಟ್ಟಣಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳು­ವುದು ಕಷ್ಟದಾಯಕ ಸ್ಥಿತಿಯಾಗಿದೆ. ಈ ಹಿನ್ನಲೆಯಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ಕರ್ನಾಟಕ ಕ್ಯಾನ್ಸರ್‌ ಸೊಸೈಟಿ ಡಾ. ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಕ್ಯಾನ್ಸರ್‌ಗೆ ಬಲಿಯಾಗುತ್ತಿ­ರು­ವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದ­ರಲ್ಲೂ ಯುವ ಜನಾಂಗ ಗುಟ್ಕಾ, ಧೂಮ­ಪಾನ ದುಶ್ಚಟಗಳಿಂದ ಕ್ಯಾನ್ಸ­ರ್‌ಗೆ ತುತ್ತಾಗುತ್ತಿದ್ದಾರೆ. ತಂಬಾಕು ಸೇವನೆ, ಸಿಗರೇಟ್ ಚಟಗಳನ್ನು ರೂಢಿಸಿ­ಕೊಂಡವರು ಅವುಗಳನ್ನು ತ್ಯಜಿಸಬೇಕು ಎಂದು ಕಿವಿಮಾತು ಹೇಳಿದರು.

ಶಿಬಿರದಲ್ಲಿ ಡಾ.ಎಂ.­ಆರ್‌. ಕುಲ­ಕರ್ಣಿ, ಡಾ.ಸತ್ಯವತಿ, ಡಾ.ಸಿಂಧೂರಿ, ಡಾ.ಯಾಸ್ಮೀನ್‌, ಡಾ.ಆನಂದ ಮೆಹತಾ, ಡಾ. ಜಹೀರ  400ಕ್ಕೂ ಅಧಿಕ ರೋಗಿಗಳ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಿದರು.

ಕೆನರಾ ಬ್ಯಾಂಕ್‌ ಪ್ರಧಾನ ವ್ಯವ­ಸ್ಥಾಪಕ ಡಿ. ವಾಸುದೇವರಾವ್‌,  ಸ್ಥಳೀಯ ಶಾಖೆಯ ವ್ಯವಸ್ಥಾಪಕ ವಿರೂ­ಪಾಕ್ಷಿ, ಸಾಯಿನಾಥ್‌, ಡಿ.ರಾಮಕೃಷ್ಣ­ಮೂರ್ತಿ, ಗುಲ್ಬರ್ಗ ವಿಭಾಗದ ಎನ್‌ಎಸ್‌ಎಸ್‌ ಸಂಯೋಜನಕಾಧಿಕಾರಿ ಎಸ್‌.ಶಿವರಾಜ, ಕೆ.ಶರಣಬಸವ ವಕೀಲ, ಆರ್‌.ಸಿ.ಪಾಟೀಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.