ADVERTISEMENT

‘ಬಿ.ಎಡ್ ಕೋರ್ಸ್‌ಗೆ ಅವಕಾಶ ನೀಡಿ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 7:44 IST
Last Updated 13 ಸೆಪ್ಟೆಂಬರ್ 2013, 7:44 IST

ಮಾನ್ವಿ: 2009ರಲ್ಲಿ ಕೆಪಿಎಸ್‌ಸಿ ಮುಖಾಂತರ ನೇಮಕಗೊಂಡ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಬಿ.ಎಡ್ ಪದವಿ ಕೋರ್ಸ್ ಮುಗಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಶಶಿಲ್ ನಮೋಶಿ ಒತ್ತಾಯಿಸಿದ್ದಾರೆ.

ಗುರುವಾರ ಪಟ್ಟಣದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ್ದ ಅವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾ­ಡಿದರು.
2009ರಲ್ಲಿ ಪದವಿ ಪೂರ್ವ ಕಾಲೇಜುಗಳಿಗೆ ಉಪನ್ಯಾಸಕರಿಗೆ 4 ವರ್ಷಗಳಲ್ಲಿ ಬಿ.ಎಡ್ ಪದವಿ ಮುಗಿ­ಸಲು ಸರ್ಕಾರ ಷರತ್ತು ವಿಧಿಸಿತ್ತು. ಆದರೆ ಈಗ ಉಪನ್ಯಾಸಕರು ಬಿ.ಎಡ್ ಪದವಿ ಅಧ್ಯಯನಕ್ಕೆ ಸಿದ್ಧರಾಗಿದ್ದರೂ ಕೂಡ ಸರ್ಕಾರ ಅವಕಾಶ ಕಲ್ಪಿಸುತ್ತಿಲ್ಲ.

ಬಾಹ್ಯವಾಗಿ  ಉಪನ್ಯಾಸಕರು ಮೈಸೂ­ರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಥವಾ  ಇಂದಿರಾ­ಗಾಂಧಿ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಬಿ.ಎಡ್ ಪದವಿ ಅಧ್ಯಯನಕ್ಕೆ ಅವಕಾಶ ಇದೆ. ಆದರೆ ಈ ವಿಶ್ವ­ವಿದ್ಯಾಲಯಗಳಲ್ಲಿ ಕೇವಲ 1ಸಾವಿರ ಬಿ.ಎಡ್ ಸೀಟುಗಳು ಮಾತ್ರ ಇವೆ.

ಈ ವಿಶ್ವವಿದ್ಯಾಲಯಗಳಲ್ಲಿ ಎಲ್ಲ ಉಪನ್ಯಾಸಕರು ಬಿ.ಎಡ್ ಸೀಟು ಪಡೆಯಲು ಸಾಧ್ಯವಿಲ್ಲ. ಕಾರಣ ಉಪನ್ಯಾಸಕರು ಒಂದು ವರ್ಷದ ರಜೆಯ ಮೇರೆಗೆ ಮಾತ್ರ ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್ ಪದವಿಗೆ ಸೇರಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಪರ್ಯಾಯ ಕ್ರಮ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

4ವರ್ಷಗಳಿಂದ ಉಪನ್ಯಾಸಕರು ಸೇವೆಯಲ್ಲಿದ್ದರೂ ಕೂಡ ಅವರು ಬಿ.ಎಡ್. ಪದವಿ ಮುಗಿಸದ ಕಾರಣ ಅವರ ಪರಿವೀಕ್ಷಣಾ ಅವಧಿ ಘೋಷಣೆ­ಯಾಗದೆ ವರ್ಗಾವಣೆ ಸೇರಿದಂತೆ ಯಾವುದೇ ಅವಕಾಶ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ಪ್ರೌಢಶಾಲೆಗಳ ಮುಖ್ಯ­ಗುರು ಬಡ್ತಿ ನಿಯಮಗಳನ್ನು ಈ ಹಿಂದಿನಂತೆಯೇ ಮುಂದವರೆಸಬೇಕು. 2005-06ರಲ್ಲಿ ಆರಂಭವಾದ ಪ್ರೌಢಶಾಲೆ­ಗಳಿಗೆ ಇಂಗ್ಲಿಷ್ ಭಾಷಾ ವಿಷಯದ ಶಿಕ್ಷಕರ ನೇಮಕ ಮಾಡ­ಬೇಕು. ಸರ್ಕಾರಿ  ಪದವಿ ಕಾಲೇಜು­ಗಳಲ್ಲಿ ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಬೇಕು.

ಪದವಿ ಕಾಲೇಜು­ಗಳ ಉಪನ್ಯಾಸಕರ ನೇಮಕಾತಿ­ಯಲ್ಲಿ ಅತಿಥಿ ಉಪನ್ಯಾಸಕರ ಸೇವೆ ಪರಿಗಣಿಸಿ ವಿಶೇಷ ಆದ್ಯತೆ ನೀಡಬೇಕು ಎಂದು ಒತ್ತಾಯಿ­ಸಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಎಸ್. ತಿಮ್ಮಾರೆಡ್ಡಿ ಭೋಗಾವತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ ಸಜ್ಜನ್, ನಾಗರಾಜ್ ಕಬ್ಬೇರ್, ಬಿಜೆಪಿ ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖತೀಫ್ ಮೆಕ್ಯಾನಿಕ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.