ADVERTISEMENT

‘ಶಾಸಕ ವಜ್ಜಲ್ ವಿರುದ್ಧ ಕ್ರಮಕ್ಕೆ ಸಭಾಪತಿಗೆ ಮನವಿ’

ಸದನದಲ್ಲಿ ಅಸಂವಿಧಾನಿಕ ಪದ ಬಳಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:20 IST
Last Updated 12 ಡಿಸೆಂಬರ್ 2013, 8:20 IST

ರಾಯಚೂರು: ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಹಕ್ಕುಚ್ಯುತಿ ಆಗುವಂಥ ಪದ ಬಳಕೆ ಮಾಡಿದ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರ ಸದಸ್ಯತ್ವ ಅನರ್ಹಗೊಳಿಸಬೇಕು, ಪ್ರಜಾ­ಪ್ರಭುತ್ವ ನೀತಿಗೆ ಬೆದರಿಕೆ ಒಡ್ಡಿದ ಆರೋಪದಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂಬುದು ಸೇರಿ­ದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ವಿಧಾನಸಭಾ ಸಭಾಪತಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಸ್ಪೃಶ್ಯ ಸಮಾಜ ಮಹಾಸಭೆ ಜಿಲ್ಲಾ ಸಮಿತಿ ಅಧ್ಯಕ್ಷ ಪಿ ಲಕ್ಷ್ಮಣ ಸೀತಿಮಠ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ಆಶಯ ರಕ್ಷಿಸಬೇಕಾದ ಶಾಸಕರೇ ಈ ರೀತಿ ಪದ ಬಳಕೆ ಮಾಡಿದ್ದಾರೆ. ಮಾನಪ್ಪ ವಜ್ಜಲ್ ಅವರು ವಡ್ಡರ ಜಾತಿಗೆ ಸೇರಿದ್ದು, ಭೋವಿ ಜನಾಂಗಕ್ಕೂ ಮತ್ತು ಸರ್ಕಾರಕ್ಕೆ ಮೀಸಲಾತಿ ದುರು­ಪಯೋಗ ಪಡಿಸಿಕೊಂಡು ದ್ರೋಹ ವೆಸಗುತ್ತಿದ್ದಾರೆ. ಅವರ ಜಾತಿ ಪ್ರಮಾಣ ಪತ್ರ ಯಾವ ಆಧಾರ ಮೇಲೆ ನೀಡಲಾಗಿದೆ ಎಂಬುದರ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದರು.

1944ರಲ್ಲಿ ಚಿತ್ರದುರ್ಗ ವಡ್ಡರ ಸಂಘದ ಪ್ರಥಮ ಅಧಿವೇಶನ ನಡೆ­ದಾಗ ವಡ್ಡರ ಜನಾಂಗ ಇನ್ನು ಮುಂದೆ ಭೋಯಿ ಎಂದು ಗುರುತಿಸಿ­ಕೊಳ್ಳಲು ಠರಾವು ಪಾಸು ಮಾಡಿ­ಕೊಂಡು ಆಗಿನ ಮೈಸೂರು ಸಂಸ್ಥಾನ ಮಹಾರಾಜರ ಆದೇಶದ ಪ್ರಕಾರ 1946ರಲ್ಲಿ ಭೋವಿ ಎಂದು ಬದಲಾ­ವಣೆ ಆಗಿದೆ. ಈ ಬಗ್ಗೆ ಆಗಿನ ಮೈಸೂರು ಸಂಸ್ಥಾನ ಸರ್ಕಾರದ ಆದೇಶ ಪ್ರತಿ ಇದೆ ಎಂದು ಹೇಳಿದರು.

ಸದಾಶಿವ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಶಾಸಕ ವಜ್ಜಲ್ ಅವರು ತಮ್ಮ ಸಮಾಜ ಯಾವಾಗ ಭೋಯಿ  ಇಂದ ಭೋವಿ­ಯಾಯಿತು ಎಂಬುದನ್ನು,  1979ರ ಮುಂಚೆ ಬಿಸಿಎಂ ಕೆಟಗರಿಯಲ್ಲಿದ್ದ ಈಗ ಎಸ್‌ಸಿ ಕೆಟಗರಿ ಹೇಗಾದರು ದಲಿತರ ಮೇಲೆ ದೌರ್ಜನ್ಯ ಆದಾಗ ಯಾವಾಗ ಪ್ರತಿ­ಭಟಿಸಿದ್ದಾರೆ? ಎಂಬುದು ಸೇರಿದಂತೆ ಸಂಘಟನೆ ಹಲವು ಪ್ರಶ್ನೆಗೆ ಉತ್ತರಿ­ಸಬೇಕು. ಸದಾಶಿವ ಆಯೋಗ ವರದಿ ಬಗ್ಗೆ ಅಪಪ್ರಚಾರ ಮಾಡಬಾರದು ಎಂದು ಒತ್ತಾಯಿಸಿದರು.

ಸದಾಶಿವ ಆಯೋಗ ವರದಿ ಜಾರಿಗೊಳಿಸಬಾರದು. ಇದರಿಂದ 99 ಜಾತಿಗೆ ಅನ್ಯಾಯ ಆಗುತ್ತದೆ ಎಂದು ಭೋವಿ ಸಮಾಜದ ಶಶಿಕಲಾ ಭೀಮರಾಯ ಅವರ ಹೇಳಿಕೆ ಖಂಡನೀಯ. ದಲಿತರ, ಮಹಿಳೆಯರ ಪರ ಹೋರಾಟ ಮಾಡಿದ ದಲಿತ ಸಂಘರ್ಷ ಸಮಿತಿ ಬಗ್ಗೆ ಟೀಕಿಸಿರು­ವುದು ಸರಿಯಲ್ಲ. ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು ಎಂದು ತಿಳಿಸಿದರು.

ರಾಯಚೂರು ಜಿಲ್ಲೆಯಲ್ಲಿ ಈಚೆಗೆ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣ ಬಗ್ಗೆ ತನಿಖೆ ನಡೆಸಬೇಕು ಎಂದು ಸಭಾಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಕೋರ­ಲಾಗಿದೆ ಎಂದು ಹೇಳಿದರು. ರವಿಕುಮಾರ, ಪಕ್ಕೀರಪ್ಪ, ಭೀಮಣ್ಣ, ಶರಣಬಸವ, ನರಸಿಂಹ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.