ADVERTISEMENT

‘ಸದಾಶಿವ ಆಯೋಗದ ವರದಿ ಜಾರಿ ಬೇಡ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 7:59 IST
Last Updated 11 ಡಿಸೆಂಬರ್ 2013, 7:59 IST

ರಾಯಚೂರು: ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದರಿಂದ ವಡ್ಡರ (ಭೋವಿ)ಜನಾಂಗ ಸೇರಿದಂತೆ ಇನ್ನಿತರ ಪರಿಶಿಷ್ಟ ಜಾತಿಗೆ ಸೇರಿರುವ ಅನೇಕ ಜನಾಂಗಕ್ಕೆ ಅನ್ಯಾಯವಾಗಲಿದೆ. ವರದಿ ಜಾರಿಗೊಳಿಸಿದರೆ, ಪರಿಶಿಷ್ಟ ಜಾತಿಗಳು ಒಗ್ಗೂಡಿ ಹೋರಾಟ ನಡೆಸಲಾಗು­ವುದು ಎಂದು ಕರ್ನಾಟಕ ವಡ್ಡರ­(ಭೋವಿ) ಮಹಿಳಾ ಸಂಘದ ಜಿಲ್ಲಾ ಘಟಕ ಅಧ್ಯಕ್ಷೆ ಶಶಿಕಲಾ ಭೀಮರಾಯ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಟ ಜಾತಿ­ಯಲ್ಲೇ 101 ಜಾತಿಗಳಿದ್ದು, ಅದರಲ್ಲಿ ವಡ್ಡರ(ಭೋವಿ), ಲಮಾಣಿ, ಕೊರವ, ಬೊಪ್ಪೆ, ಜಾತಿಗೇರ ಸೇರಿದಂತೆ ಅನೇಕ  ಜಾತಿಗಳಿದ್ದು, ಇದರಿಂದ 99 ಜಾತಿ­ಗಳಿಗೆ ಅನ್ಯಾಯವಾಗಲಿದೆ ಎಂದು ಸಮಸ್ಯೆ ವಿವರಿಸಿದರು.

ಈ ಜಾತಿಗಳ ಪರಿಗಣಿಸದೇ ಸದಾ­ಶಿವ ಆಯೋಗ ವರದಿ ತಯಾರಿಸ­ಲಾಗಿದೆ. ಈ ವರದಿಯನ್ನು ಜಾರಿಗೊ­ಳಿಸಿದರೆ ಹೋರಾಟ ನಡೆಸಲಾಗುತ್ತದೆ. ತಮ್ಮ ಜನಾಂಗ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಲಮಾಣಿ ಜನಾಂಗದವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನಿತರ ಪರಿಶಿಷ್ಟ ಜಾತಿಗಳು ಅನೇಕ ತೊಂದರೆಗಳನ್ನು ಅನುಭವಿಸುತ್ತಾ ಇದ್ದಾರೆ. ಭೋವಿ ಜನಾಂಗ ಆದಿಮಾನವ ಕಾಲದಿಂದ ಬಂದಿರುವ ಜನಾಂಗವಾಗಿರುವ ಬಗ್ಗೆ ಸದಾಶಿವ ಆಯೋಗಕ್ಕೆ ತಿಳಿದಿದ್ದರೂ ಕಡೆಗಣಿಸಲಾಗಿದೆ ಎಂದು ತಿಳಿಸಿದರು.

ವಜ್ಜಲ್ ಹೇಳಿಕೆ ಸ್ವಾಗತಾರ್ಹ: ಬೆಳಗಾವಿ ಅಧಿವೇಶನದಲ್ಲಿ ಲಿಂಗಸು­ಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಅವರು 99 ಪರಿಶಿಷ್ಟ ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ಸ್ವಾಗತಾರ್ಹವಾಗಿದೆ. 101 ಜಾತಿಗಳು ಪರಿಶಿಷ್ಟ ಜಾತಿಯಲ್ಲಿ ಬರುತ್ತವೆ. ಸದನದಲ್ಲಿ ಧ್ವನಿ ಎತ್ತಿದ ಶಾಸಕ ಮಾನಪ್ಪ ವಜ್ಜಲ್‌ ಅವರನ್ನು ಶಾಸಕ ಸ್ಥಾನದಿಂದ ರದ್ದುಪಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೇಳಿಕೆ ಖಂಡನೀಯ. ಶಾಸಕರ ಸ್ಥಾನವನ್ನು ರದ್ದುಪಡಿಸುವಂತೆ ಕೇಳುವ ಹಕ್ಕು ಇಲ್ಲ ಎಂದು ಹೇಳಿದರು.

ಸದಾಶಿವ ಆಯೋಗದ ವರದಿ­ಯಿಂದ ವಡ್ಡರ(ಭೋವಿ) ಸೇರಿದಂತೆ ಅನೇಕ ಜನಾಂಗಕ್ಕೆ ಅನ್ಯಾಯ­ವಾಗುತ್ತಿದ್ದು, ವರದಿ ಜಾರಿಗೊಳಿಸಿದರೆ ಉಗ್ರಹೋರಾಟ ನಡೆಸಲಾಗುವುದು ಎಂದು ಹೇಳಿದರು. ಬಸವರಾಜ ಭಜಂತ್ರಿ ಪತ್ರಿಕಾಗೋಷ್ಠಿ­ಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.