ADVERTISEMENT

‘ಸಮಾನ ಮನಸ್ಕ ಪಕ್ಷಗಳಿಗೆ ಬೆಂಬಲ’

ರಾಯ­ಚೂರಿನಿಂದ ಎಂ. ನಾಗರಾಜ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 10:05 IST
Last Updated 19 ಮಾರ್ಚ್ 2014, 10:05 IST

ರಾಯಚೂರು: 16ನೇ ಲೋಕಸಭಾ ಚುನಾವಣೆಗೆ ಸಿಪಿಐಎಂಎಲ್ ಪಕ್ಷವು 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಉಳಿದ ಕಡೆಗೆ ಕೆಲ ಕನಿಷ್ಠ ಮಾನದಂಡಗಳಾದ ಜಾಗತೀಕರಣ, ಕೋಮುವಾದ, ಭ್ರಷ್ಟಾಚಾರ ವಿರೋಧಿಸುವಂಥ ಸಮಾನ ಮನಸ್ಕ ಪಕ್ಷಗಳಿಗೆ ಬೆಂಬಲ ನೀಡುವ ತೀರ್ಮಾನ ಮಾಡಲಾಗಿದೆ. ರೈತರು, ಕಾರ್ಮಿಕರು, ಯುವಜನತೆ ಹಾಗೂ ಬುದ್ಧಿವಂತ ವರ್ಗವು ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಸಿಪಿಐಎಂಎಲ್ ಪಕ್ಷದ ಪಾಲಿಟಿ ಬ್ಯೂರೊ ಸದಸ್ಯ ಆರ್. ಮಾನಸಯ್ಯ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಮತ್ತಿತರೆ ಬಲ­ಪಂಥೀಯ ಪಕ್ಷಗಳ ರಾಜಕೀಯ ಪಾಪದ ಕೊಡ ತುಂಬಿದೆ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಹೋರಾಟ­ಗಾರರು, ಚಳವಳಿಗಾರರು ಈ ಚುನಾ­ವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿ­ದ್ದಾರೆ. ಹೋರಾಟದ ಭಾಗವಾಗಿಯೇ ಸಿಪಿಐಎಂ ಪಕ್ಷವು ಚುನಾವಣೆ ಪರಿಗಣಿ­ಸಿದೆ. ಈ ಚುನಾವಣೆಗೆ ಕಣಕ್ಕಿಳಿ­ಯುತ್ತಿ­ರುವುದು ಈವರೆಗೆ ಮಾಡಿ­ಕೊಂಡು ಬಂದಿರುವ ಹೋರಾಟದ ಕ್ರೋಡಿೀಕ­ರಣ ಎಂದು ವಿವರಿಸಿದರು.

ರಾಜ್ಯದಲ್ಲಿ ಬೆಂಗಳೂರು ಉತ್ತರ, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಸೇರಿದಂತೆ ಒಟ್ಟು 8 ಕ್ಷೇತ್ರಗಳಲ್ಲಿ ಪಕ್ಷ ತನ್ನ ಅಭ್ಯರ್ಥಿ ಕಣಕ್ಕಳಿಸುತ್ತಿದೆ. ರಾಯ­ಚೂರು ಲೋಕಸಭಾ ಕ್ಷೇತ್ರಕ್ಕೆ ಯುವಕರಾದ ಎಂ. ನಾಗರಾಜ ಅವರು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿ­ದ್ದಾರೆ ಎಂದು ಹೇಳಿದರು.

ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ ಈ ಪಂಗಡದ  ರಾಜರು, ರಾಯರು, ಗೌಡರು ಸ್ಪರ್ಧಿಸುತ್ತಿದ್ದಾರೆ. ಈ ಪಂಗಡದ ನಿಜವಾದ ಜನಸಮಾನ್ಯ ವ್ಯಕ್ತಿ ಸ್ಪರ್ಧಿಸಿಲ್ಲ. ಹೀಗಾಗಿ ಪಕ್ಷವು ನಾಗರಾಜ ಅವರನ್ನು ಕಣಕ್ಕಿಳಿಸುತ್ತಿದೆ ಎಂದು ತಿಳಿಸಿದರು.

ರಾಜ್ಯ ಸಮಿತಿ ಸದಸ್ಯ ರುದ್ರಯ್ಯ ಮಾತನಾಡಿ, ಮೋದಿ ಗುಜರಾಜ ಮುಖ್ಯಮಂತ್ರಿ ಆಗುವ ಮೊದಲು 45,000 ಕೋಟಿ ಸಾಲವಿತ್ತು. ಈಗ 95,000 ಕೋಟಿ ಆಗಿದೆ.  ಅಲ್ಲಿ ದಲಿತ, ಆದಿವಾಸಿ, ಬಡವರ ಸ್ಥಿತಿ ಚಿಂತಾಜನಕವಾಗಿದೆ. ನರೇಂದ್ರ ಮೋದಿಯಿಂದ ಅಭಿ­ವೃದ್ಧಿಯಾ­ಗಿರು­ವುದು ಬಂಡವಾಳಶಾಹಿಗಳು ಮತ್ತು ಕಂಪೆನಿಗಳು ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.