ADVERTISEMENT

‘ಜಲ ಸಂರಕ್ಷಣೆ ಎಲ್ಲರ ಜವಾಬ್ದಾರಿ’

ಸಹಭಾಗಿತ್ವದಲ್ಲಿ ಅಂತರ್ಜಲ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 10:39 IST
Last Updated 1 ನವೆಂಬರ್ 2019, 10:39 IST
ಮಾನ್ವಿಯಲ್ಲಿ ಗುರುವಾರ ಜಲ ಸಂರಕ್ಷಣೆಯ ಸುಲಭ ಉಪಾಯಗಳ ಕೈಪಿಡಿಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚೆನ್ನಬಸವನಗೌಡ ಬೆಟ್ಟದೂರು ಬಿಡುಗಡೆ ಮಾಡಿದರು
ಮಾನ್ವಿಯಲ್ಲಿ ಗುರುವಾರ ಜಲ ಸಂರಕ್ಷಣೆಯ ಸುಲಭ ಉಪಾಯಗಳ ಕೈಪಿಡಿಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚೆನ್ನಬಸವನಗೌಡ ಬೆಟ್ಟದೂರು ಬಿಡುಗಡೆ ಮಾಡಿದರು   

ಮಾನ್ವಿ: ‘ಅಂತರ್ಜಲ ಮಟ್ಟ ಹೆಚ್ಚಳ ಮತ್ತು ಜಲ ಸಂರಕ್ಷಣೆ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚೆನ್ನಬಸವನಗೌಡ ಬೆಟ್ಟದೂರು ಹೇಳಿದರು.

ಗುರುವಾರ ಪಟ್ಟಣದ ಎಪಿಎಂಸಿ ರೈತ ಸಮುದಾಯ ಭವನದಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿ, ರಾಜೀವ್‌ ಗಾಂಧಿ ರಾಷ್ಟ್ರೀಯ ಅಂತರ್ಜಲ ತರಬೇತಿ ಮತ್ತು ಸಂಶೋಧನ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸ್ಥಳೀಯ ಅಂತರ್ಜಲ ಸಮಸ್ಯೆಗಳು ಮತ್ತು ಸಹಭಾಗಿತ್ವದಲ್ಲಿ ಅಂತರ್ಜಲ ನಿರ್ವಹಣೆ’ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರು ಜಲಸಂರಕ್ಷಣೆಯ ವಿಧಾನಗಳ ಬಗ್ಗೆ ತಿಳಿದುಕೊಂಡು ಅನುಸರಿಸಬೇಕು. ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಮೊದಲ ಆದ್ಯತೆ ನೀಡಬೇಕು ’ ಎಂದು ಅವರು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಹ್ಮದ್‌ ಯೂಸುಫ್ ಮಾತನಾಡಿ,‘ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಜಿಲ್ಲೆ ಸಾಕಷ್ಟು ತೊಂದರೆ ಅನುಭವಿಸಿದೆ. ನೀರಾವರಿ ಪ್ರದೇಶದಲ್ಲಿನ ನೀರು ಕಲುಷಿತಗೊಂಡಿದ್ದರೆ, ಮಳೆ ಕೊರತೆಯಿಂದ ಮಳೆಯಾತ್ರಿತ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಅತಿಯಾದ ರಾಸಾಯನಿಕಗಳ ಬಳಕೆ ನೀರು ಕಲುಷಿತಗೊಳ್ಳಲು ಮತ್ತು ಅತಿಯಾದ ನೀರಿನ ಬಳಕೆ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗಿದೆ. ನೀರಿನ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕಿದೆ. ರೈತ ಕೇಂದ್ರಿತ ತರಬೇತಿ ಅತ್ಯಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಜಲ ಸಂರಕ್ಷಣೆಯ ಸುಲಭ ಉಪಾಯಗಳ ಕುರಿತು ಕೈಪಿಡಿಯನ್ನು ಬಿಡುಗಡೆ ಮಾಡಿ ರೈತರಿಗೆ ವಿತರಿಸಲಾಯಿತು.
ಅಂತರ್ಜಲ ಪರಿಸ್ಥಿತಿ, ಸುಸ್ಥಿರತೆ ಮತ್ತು ನಿರ್ವಹಣೆ, ಅಂತರ್ಜಲ ಗುಣಮಟ್ಟ ಹಾಗೂ ಆರೋಗ್ಯ, ಮಳೆ ನೀರು ಸಂಗ್ರಹಣೆ, ಅಂತರ್ಜಲ ಪರಿಶೋಧನೆ ಮುಂತಾದ ವಿಷಯಗಳ ಕುರಿತು ತಜ್ಞರು ವಿಷಯ ಮಂಡನೆ ಮಾಡಿದರು. ಸಂಘ ಸಂಸ್ಥೆಗಳ ಸದಸ್ಯರು ಹಾಗೂ ರೈತರೊಂದಿಗೆ ಸಂವಾದ ನಡೆಯಿತು.

ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕ ವಿ.ಕುನ್ಹಾಂಬು, ಅಧಿಕ್ಷಕ ಭೂಜಲ ವಿಜ್ಞಾನಿ ಡಾ.ಎ.ಸುಬ್ಬರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ನಯೀಮ್‌ ಹುಸೇನ್‌, ವಿಜ್ಞಾನಿಗಳಾದ ಅನಿತಾ ಶ್ಯಾಮ್‌, ಡಾ.ಅನಂತಕುಮಾರ ಅರಸ್‌, ಡಾ.ಎಸ್‌.ಎಸ್‌.ವಿಠಲ್, ಪ್ರೊ.ಯು.ಸತೀಶಕುಮಾರ, ಶಫೀ ಉಲ್ಲಾ ಶೇಖ್‌, ಮಹ್ಮದ್‌ ಹಸನ್‌ ಮುಲ್ಲಾ, ಸಹಾಯಕ ಕೃಷಿ ನಿರ್ದೇಶಕ ಬಿ.ಹುಸೇನ್‌ ಸಾಹೇಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.