ADVERTISEMENT

10 ಜನರಿಗೆ ಗಾಯ: 74ಜನರ ವಿರುದ್ಧ ಪ್ರಕರಣ

ಚಿಕ್ಕಕಡಬೂರು ಗ್ರಾಮದಲ್ಲಿ ಗುಂಪು ಘರ್ಷಣೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 6:53 IST
Last Updated 16 ಜುಲೈ 2013, 6:53 IST

ಸಿಂಧನೂರು: ತಾಲ್ಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ಎರಡು ಸಮುದಾಯಗಳು ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದ ಗುಂಪು ಘರ್ಷಣೆಯಲ್ಲಿ 10 ಜನರು ಗಾಯಗೊಂಡು, 74 ಜನರ ವಿರುದ್ಧ ಪ್ರಕರಣ ದಾಖಲಾದ ಘಟನೆ ಸೋಮವಾರ ನಡೆದಿದೆ.

ಗ್ರಾಮದ ದಲಿತ ಮಹಿಳೆ ಶರಣಮ್ಮಳೊಂದಿಗೆ ಕುರುಬ ಸಮುದಾಯದ ಅಯ್ಯಪ್ಪ ಎನ್ನುವ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ ಕಾರಣ ದಲಿತ ಮುಖಂಡರು ಅಯ್ಯಪ್ಪ ಹಾಗೂ ಅವನ ಬೆಂಬಲಕ್ಕೆ ನಿಂತಿದ್ದ ಯಲ್ಲಮ್ಮ, ಅಮರಪ್ಪ, ರಾಮಪ್ಪ, ಮಂಜು, ರಮೇಶ ವಿರುದ್ಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಭಾನುವಾರ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಕುರುಬ ಸಮುದಾಯದ ಕೆಲವರು ಸೋಮವಾರ ದಲಿತರ ಮನೆಗಳ ಮೇಲೆ ದಾಳಿ ಮಾಡಿ ಕೈಗೆ ಸಿಕ್ಕವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ವೆಂಕಟೇಶ, ಬಸಪ್ಪ, ಬಸಮ್ಮ, ದುರುಗಪ್ಪ ಸೇರಿದಂತೆ 10 ಜನರು ಗಾಯಗೊಂಡಿದ್ದು, ಈ ಪೈಕಿ ಆರು ಮಂದಿ ಮಸ್ಕಿಯ ಅನ್ನಪೂರ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 4 ಜನರಿಗೆ ತೀವ್ರ ಗಾಯಗಳಾದ ಹಿನ್ನೆಲೆಯಲ್ಲಿ ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ 74 ಜನರ ವಿರುದ್ಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಘಟನಾ ಸ್ಥಳದಲ್ಲಿ    ಡಿವೈಎಸ್‌ಪಿ ದಿವ್ಯಾ ಗೋಪಿನಾಥ, ಸಿಪಿಐ ಶೇಖರಪ್ಪ ಎಚ್., ಪಿಎಸ್‌ಐ ಬಾಳನಗೌಡ ಬಿಡಾರ ಹೂಡಿದ್ದು, ವಾತಾವರಣ ತಿಳಿಗೊಳಿಸುವ ಪ್ರಯತ್ನದಲ್ಲಿದ್ದಾರೆ.

ಪೊಲೀಸರ ವಿರುದ್ಧ ಆಕ್ರೋಶ : ಭಾನುವಾರ ನಡೆದ ಸಣ್ಣ ಗಲಾಟೆಯಿಂದ ಕುರುಬ ಸಮುದಾಯದವರು ಹಲ್ಲೆ ನಡೆಸಬಹುದು. ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಲಾಗಿತ್ತು. ಗ್ರಾಮದಲ್ಲಿ ಠಿಕಾಣಿ ಹೂಡಿದ್ದ ಪೊಲೀಸರು ಕರ್ತವ್ಯ ಲೋಪವೆಸಗಿದ್ದರಿಂದ ಸೋಮವಾರ ಬೆಳಗ್ಗೆ ದಲಿತರ ಮೇಲೆ ತೀವ್ರ ಹಲ್ಲೆ ನಡೆದಿದೆ ಎಂದು ಬಸವರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.