ರಾಯಚೂರು: ಜಿಲ್ಲೆಯದಾದ್ಯಂತ 5ನೇ ದಿನದ ಗಣೇಶ ವಿಸರ್ಜನೆ ಅದ್ದೂರಿ ಮೆರವಣಿಗೆಯೊಂದಿಗೆ ನೆರವೇರಿತು.
ನಗರದಲ್ಲಿ ಬುಧವಾರ ರಾತ್ರಿ ಸುಮಾರು 10 ಗಂಟೆಯಿಂದ ಗುರುವಾರ ಬೆಳಿಗ್ಗೆ 11 ಗಂಟೆಯ ವರೆಗೆ ಮೆರವಣಿಗೆ ನಡೆಯಿತು. ಡಿ.ಜೆ ನಿಷೇಧ ಮಾಡಿದರೂ ಅನೇಕ ಗಜಾನನ ಮಂಡಳಿಗಳು ಬೃಹತ್ ಗಾತ್ರದ ಸೌಂಡ್ ಸಿಸ್ಟಂನೊಂದಿಗೆ ಭವ್ಯವಾದ ಮೆರವಣಿಗೆ ಮೂಲಕ ಗಣನಾಯಕನಿಗೆ ವಿದಾಯ ಹೇಳಿದವು.
ಯುವಕರು ಡಿ.ಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಪರಸ್ಪರ ಬನ್ಣ ಎರಚಿಕೊಂಡು ಗಣಪತಿ ಬಪ್ಪ ಮೋರಯಾ ಘೊಷಣೆ ಹಾಕಿ ಮೆರವಣಿಗೆಯಲ್ಲಿ ಸಾಗಿದರು.
ನಗರದ ವ್ಯಾಪ್ತಿಯ ಗಣೇಶಗಳನ್ನು ಖಾಸಭಾವಿಯಲ್ಲಿ ವಿಸರ್ಜನೆ ಮಾಡಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ನಗರದ 389 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1015 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು.
ಬಿಗಿ ಬಂದೋಬಸ್ತ್: ಗಣೇಶ ವಿಸರ್ಜನೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ 4 ಕೆಎಆರ್ ಪಿ ತುಕಡಿ, 9ಡಿಆರ್ ಪಿ, , ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 3 ಡಿಎಸ್ ಪಿ, 16 ಇನ್ಸ್ ಪೆಕ್ಟರ್, 60 ಸಬ್ ಇನ್ಸ್ ಪೆಕ್ಟರ್, 1050 ಎಎಸ್ ಐ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು 500 ಗೃಹ ರಕ್ಷಕದಳದವರನ್ನು ನಿಯೋಜಿಸಲಾಗಿತ್ತು.
ಗಾಜಗಾರಪೇಟೆಯಿಂದ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ಮಾವಿನಕೆರೆಗೆ ಬರುತ್ತಿದ್ದಂತೆ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಪೊಲೀಸರು ಲಾಠಿ ಬೀಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.