ADVERTISEMENT

ಬೀದರ್: ಕೆರೆ ಪುನಶ್ಚೇತನ, ಉದ್ಯಾನ ಅಭಿವೃದ್ಧಿಗೆ ₹110 ಕೋಟಿ

​ಪ್ರಜಾವಾಣಿ ವಾರ್ತೆ
Published 22 ಮೇ 2025, 16:14 IST
Last Updated 22 ಮೇ 2025, 16:14 IST
ಬೆಂಗಳೂರಿನ ವಿಕಾಸಸೌಧದ 422ನೇ ಕೊಠಡಿಯಲ್ಲಿ ಗುರುವಾರ ಬೀದರ್ ಜಿಲ್ಲೆಯ ಕೆರೆಗಳ ಪುನಶ್ಚೇತನ ಮತ್ತು ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು 
ಬೆಂಗಳೂರಿನ ವಿಕಾಸಸೌಧದ 422ನೇ ಕೊಠಡಿಯಲ್ಲಿ ಗುರುವಾರ ಬೀದರ್ ಜಿಲ್ಲೆಯ ಕೆರೆಗಳ ಪುನಶ್ಚೇತನ ಮತ್ತು ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು    

ಬೀದರ್: ‘ಜಿಲ್ಲೆಯಲ್ಲಿರುವ 29 ಕೆರೆಗಳ ಪುನಶ್ಚೇತನಕ್ಕೆ ₹77 ಕೋಟಿ, 33 ಉದ್ಯಾನವನಗಳ ಅಭಿವೃದ್ಧಿಗೆ ₹23 ಕೋಟಿಯನ್ನು ಅಮೃತ್ -2 ಅಡಿಯಲ್ಲಿ ಮಂಜೂರು ಮಾಡಲಾಗಿದೆ. ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ತ್ವರಿತವಾಗಿ ಕಾಮಗಾರಿ ಆರಂಭಿಸಬೇಕು’ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ವಿಕಾಸಸೌಧದ 422ನೇ ಕೊಠಡಿಯಲ್ಲಿ ಗುರುವಾರ ಪೌರಾಡಳಿತ ಸಚಿವ ರಹೀಂ ಖಾನ್ ಅವರೊಂದಿಗೆ ಬೀದರ್ ಜಿಲ್ಲೆಯ ಕೆರೆಗಳ ಪುನಶ್ಚೇತನ ಮತ್ತು ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

ಈ ಬಾರಿಯ ವನಮಹೋತ್ಸವದ ವೇಳೆ ಬೀದರ್ ಹವಾಮಾನಕ್ಕೆ ಹೊಂದಿಕೊಳ್ಳುವಂತಹ ಸ್ಥಳೀಯ ಪ್ರಭೇದದ ಗಿಡಗಳನ್ನು ನೆಟ್ಟು ಬೆಳೆಸಬೇಕು. ಎತ್ತರದ ಸಸಿಗಳನ್ನು ನೆಟ್ಟರೆ ಅವು ಹೆಚ್ಚಿನ ಪ್ರಮಾಣದಲ್ಲಿ ಬದುಕಿ ಉಳಿಯುತ್ತವೆ. ಈ ಬಾರಿ ಎತ್ತರದ ಸಸಿಗಳನ್ನು ನೆಡಬೇಕು ಎಂದರು.

ADVERTISEMENT

ಉದ್ಯಾನದಲ್ಲಿ ಪುತ್ಥಳಿಗೆ ಅವಕಾಶವಿಲ್ಲ: ಉದ್ಯಾನಗಳ ಪ್ರದೇಶದಲ್ಲಿ ಅನಧಿಕೃತವಾಗಿ ಯಾವುದೇ ಪುತ್ಥಳಿ ಸ್ಥಾಪಿಸಲು ಅಥವಾ ದೇವಾಲಯ ನಿರ್ಮಾಣ ಮಾಡಲು ಅವಕಾಶ ನೀಡಬಾರದು. ಉದ್ಯಾನಗಳು ಉತ್ತಮ ಶ್ವಾಸ ತಾಣಗಳಾಗಿರಬೇಕು. ಇಲ್ಲಿ ಸ್ಥಳೀಯ ಪ್ರಬೇಧದ ಗಿಡಗಳನ್ನು ಬೆಳೆಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿರುವ 33 ಉದ್ಯಾನಗಳಲ್ಲಿ ಯಾವುದೂ ಒತ್ತುವರಿ ಆಗದಂತೆ ತಡೆಯಲು ಹಾಗೂ ಅವುಗಳಲ್ಲಿ ಹೂವಿನ ಗಿಡಗಳನ್ನು ದನಕರುಗಳು ತಿನ್ನದಂತೆ ಕಾಪಾಡಲು ಗಟ್ಟಿಮುಟ್ಟಾದ ತಂತಿಬೇಲಿ ಹಾಕಬೇಕು ಸಚಿವ ಖಂಡ್ರೆ ತಿಳಿಸಿದರು.

ಉದ್ಯಾನಗಳನ್ನು ವಿಶ್ವದರ್ಜೆಯ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಬೇಕು, ಮಕ್ಕಳ ಆಟಿಕೆಗಳನ್ನು ಅಳವಡಿಸಿ  ನಿರ್ವಹಣೆ ಮಾಡಬೇಕು. ಮರಗಳ ಮೇಲೆ ಅವುಗಳ ಪ್ರಭೇದ, ವೈಶಿಷ್ಟ್ಯದ ಫಲಕ ಹಾಕಿ ಮಕ್ಕಳಿಗೆ ಪ್ರಕೃತಿ, ಪರಿಸರದ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕೆರೆಗಳ ಹೂಳು ತೆಗೆಯಲು ಸೂಚನೆ: ಕೆರೆಗಳ ಸ್ವಚ್ಛತೆ ಅತಿ ಮುಖ್ಯವಾಗಿದೆ. ಕೆರೆಗಳಿಗೆ ತ್ಯಾಜ್ಯದ ನೀರು ಸೇರಿದರೆ ಜನ, ಜಾನುವಾರಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಲಚರಗಳು ಸಾವಿಗೀಡಾಗುತ್ತವೆ. ಹೀಗಾಗಿ ಜಿಲ್ಲೆಯ ಎಲ್ಲ 29 ಕೆರೆಗಳ ಹೂಳು ತೆಗೆಯಬೇಕು, ತ್ಯಾಜ್ಯ ಹರಿಯಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಎಸ್.ಟಿ.ಪಿ. ಸ್ಥಾಪನೆ: ನಗರ, ಪಟ್ಟಣಕ್ಕೆ ಹೊಂದಿಕೊಂಡಿರುವ ಕೆರೆಗಳ ಬಳಿ ತ್ಯಾಜ್ಯ ಜಲ ಸಂಸ್ಕರಣಾ ಘಟಕ (ಎಸ್.ಟಿ.ಪಿ.) ಸ್ಥಾಪಿಸಿ, ಜಲ ಶುದ್ಧೀಕರಣವಾದ ಬಳಿಕ ಕೆರೆಗೆ ಹರಿಸಬೇಕು. ಯೋಜನಾ ವರದಿ ಸಿದ್ಧಪಡಿಸಿ ಎಂದು ಈಶ್ವರ ಖಂಡ್ರೆ ಸೂಚನೆ ನೀಡಿದರು.

ಈಗಾಗಲೇ ಸ್ಥಾಪಿಸಲಾಗಿರುವ ಎಸ್.ಟಿ.ಪಿ.ಗಳು ಕಾರ್ಯನಿರ್ವಹಿಸುತ್ತಿವೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಸೂಚಿಸಿದ ಅವರು, ಜಲ ಮೂಲಗಳ ನಿಯಮಿತ ಪರಿಶೀಲನೆ ನಡೆಸುವಂತೆಯೂ ತಿಳಿಸಿದರು.

ಭಾಲ್ಕಿಯ ಮಾಸೂಂಪಾಶಾ ಕಾಲೊನಿಯಲ್ಲಿರುವ 8 ಎಕರೆ ಕೆರೆ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಹಾಗೂ ಏರಿ ನಿರ್ಮಾಣ ಮಾಡಲು ಸೂಚನೆ ನೀಡಿದರು.

ಪೌರಾಡಳಿತ ಸಚಿವ ರಹೀಂ ಖಾನ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಪೌರಾಡಳಿತ ಇಲಾಖೆ ನಿರ್ದೇಶಕ ಪ್ರಭುಲಿಂಗ್ ಕವಳಿಕಟ್ಟಿ ಮತ್ತು ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.