ADVERTISEMENT

ರಾಯಚೂರು: 14 ಜನರಿಗೆ ಕೋವಿಡ್‌ ದೃಢ, ಸೋಂಕಿತರ ಸಂಖ್ಯೆ 457ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 15:43 IST
Last Updated 26 ಜೂನ್ 2020, 15:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಇಲಾಖೆಯಿಂದ ಶುಕ್ರವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ರಾಯಚೂರು ಜಿಲ್ಲೆಯಲ್ಲಿ ಮತ್ತೆ 14 ಜನರಿಗೆ ಕೋವಿಡ್‌ ದೃಡವಾಗಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 457ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಗುಣಮುಖರಾಗಿ 355 ಜನರು ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಲ್ಲಿ ಸದ್ಯ 100 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌ ಸೋಂಕಿತರನ್ನು ಪತ್ತೆ ಮಾಡುವ ನಿರಂತರವಾಗಿ ನಡೆಯುತ್ತಿದೆ.

ಜಿಲ್ಲೆಯಿಂದ ಶುಕ್ರವಾರ 277 ಗಂಟಲು ದ್ರವ ಮಾದರಿಗಳನ್ನು ಕಳುಹಿಸಲಾಗಿದೆ. ಅದರಲ್ಲಿ ದೇವದುರ್ಗ ತಾಲ್ಲೂಕಿನಿಂದ 36, ಲಿಂಗಸೂಗೂರು ತಾಲ್ಲೂಕಿನಿಂದ 42, ಮಾನ್ವಿ ತಾಲ್ಲೂಕಿನಿಂದ 83, ಸಿಂಧನೂರು ತಾಲ್ಲೂಕಿನಿಂದ 28 ಮತ್ತು ರಾಯಚೂರು ತಾಲ್ಲೂಕಿನಿಂದ 88 ಗಂಟಲು ದ್ರವ ಮಾದರಿಗಳನ್ನು ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ADVERTISEMENT

ಶುಕ್ರವಾರ ಬಂದಿರುವ ವರದಿಗಳಲ್ಲಿ 262 ನೆಗೆಟಿವ್ ಆಗಿವೆ. ಜಿಲ್ಲೆಯಿಂದ ಇದೂವರೆಗೆ ಒಟ್ಟು 21,716 ಜನರ ಗಂಟಲಿನ ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅವುಗಳಲ್ಲಿ 19,926 ವರದಿಗಳು ನೆಗೆಟಿವ್ ಆಗಿವೆ. ಇನ್ನುಳಿದ 1,327 ಮಾದರಿಗಳ ಫಲಿತಾಂಶ ಬರಬೇಕಿದೆ.

ಜಿಲ್ಲೆಯಾದ್ಯಂತ ಫಿವರ್ ಕ್ಲಿನಿಕ್‌ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಜೂನ್‌ 26 ರಂದು 489 ಜನರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ.

ರಾಯಚೂರು ತಾಲ್ಲೂಕಿನ ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ 118, ಸಿಂಧನೂರು ತಾಲ್ಲೂಕು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ 14, ಮಾನ್ವಿ ತಾಲ್ಲೂಕು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ 22 ಹಾಗೂ ಲಿಂಗಸೂಗೂರು ತಾಲ್ಲೂಕು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ 21 ಜನರು ಸೇರಿದಂತೆ ಒಟ್ಟು 175 ಜನರನ್ನು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ಇರಿಸಿ ನಿಗಾವಹಿಸಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ ಪತ್ತೆಯಾಗಿರುವ 457 ಕೋವಿಡ್‌ ಸೋಂಕಿತರಲ್ಲಿ ಗರಿಷ್ಠ ದೇವದುರ್ಗ ತಾಲ್ಲೂಕಿನಲ್ಲಿ 332 ಪ್ರಕರಣಗಳು ಪತ್ತೆಯಾಗಿವೆ. ರಾಯಚೂರು ತಾಲ್ಲೂಕಿನಲ್ಲಿ 82, ಲಿಂಗಸುಗೂರಿನಲ್ಲಿ 27, ಮಾನ್ವಿ 12 ಹಾಗೂ ಸಿಂಧನೂರಿನಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.