ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ರಾಯಚೂರಿನ ಕೃಷಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪುಟ್ಟರಾಜ ಪೊಲೀಸ್ ಪಾಟೀಲ ಹಾಗೂ ಯಾದಗಿರಿ ಜಿಲ್ಲೆಯ ಭೀಮರಾಯನಗುಡಿಯ ಕೃಷಿ ಕಾಲೇಜಿನ ವಿದ್ಯಾರ್ಥಿ ಸಾಗರ ಅವರು ತಲಾ ಆರು ಚಿನ್ನದ ಪದಕ ಪಡೆದರು.
ರಾಯಚೂರಿನ ಕೃಷಿ ಕಾಲೇಜಿನ ಬಿ.ಎಸ್‌ಸಿ ವಿದ್ಯಾರ್ಥಿನಿ ಕೊಪ್ಪಳ ಜಿಲ್ಲೆಯ ಕುದುರೆಮೋತಿಯ ಗಾಯತ್ರಿ ನಾಲ್ಕು ಚಿನ್ನ ಬಾಚಿಕೊಂಡರು. ಕೃಷಿ ಸ್ನಾತಕೋತ್ತರ ವಿಭಾಗದಲ್ಲಿ ಅಭಿಲಾಷ ಭರತೇಶ್ ಯಲಗುದ್ರಿ ಮೂರು ಚಿನ್ನದ ಪದಕ ಪಡೆದರು. ಪಿಎಚ್.ಡಿ ವಿಭಾಗದಲ್ಲಿ ಕೃಷಿ ಕೀಟಶಾಸ್ತ್ರದಲ್ಲಿ ಜಿ. ಶ್ಯಾಮ್ ಸುಪ್ರೀತ್ ಅವರು ಎರಡು ಚಿನ್ನದ ಪದಕ, ಫಾರ್ಮ್ ಮಷನರಿ ಹಾಗೂ ಪವರ್ ಎಂಜಿನಿಯರಿಂಗ್ ವಿಭಾಗದಲ್ಲಿ ಕಾವ್ಯಾ ಎರಡು ಚಿನ್ನದ ಪದಕ ಸ್ವೀಕರಿಸಿದರು.
ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಉತ್ಕೃಷ್ಠ ಸಾಧನೆ ಮಾಡಿದ ಕೊಪ್ಪಳ ತಾಲ್ಲೂಕಿನ ಕುಷ್ಠಗಿಯ ಕೆ.ಗೋನಾಳ ಗ್ರಾಮದ ಪ್ರಗತಿಪರ ರೈತರ ದೇವೇಂದ್ರಪ್ಪ ಬಳೂಟಗಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
14ನೇ ಘಟಿಕೋತ್ಸವದಲ್ಲಿ 352 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ವರ್ಚುವಲ್ ಮೂಲಕ ಮಾತನಾಡಿದರು. ನವದೆಹಲಿಯ ವಿಶ್ವವಿದ್ಯಾಲಯಗಳ ಒಕ್ಕೂಟಕದ ಮಹಾ ಕಾರ್ಯದರ್ಶಿ ಪಂಕಜಾ ಮಿತ್ತಲ್ ಘಟಿಕೋತ್ಸವ ಭಾಷಣ ಮಾಡಿದರು. ವಿಶ್ವವಿದ್ಯಾಲಯದ ಸಹ ಕುಲಾಧಿಪತಿಯೂ ಆದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕುಲಪತಿ ಡಾ.ಎಂ.ಹನುಮಂತಪ್ಪ, ಕುಲಸಚಿವ ದುರ್ಗೇಶ, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.
ಚಿಕ್ಕ ಹೋಟೆಲ್ ನಡೆಸುತ್ತಾ ಮಗಳನ್ನು ಓದಿಸಿದ್ದ ತಾಯಿಗೆ ಮಗಳು ನಾಲ್ಕು ಚಿನ್ನದ ಪದಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಕೊಪ್ಪಳ ಜಿಲ್ಲೆಯ ಕುದರಿಮೋತಿ ಗ್ರಾಮದ ವಿದ್ಯಾರ್ಥಿನಿ ಗಾಯತ್ರಿ ಹೆಮ್ಮೆಯ ನಗೆ ಬೀರಿದರು.
‘ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ ಜನರ ಸೇವೆಯಲ್ಲಿ ತೊಡಗಬೇಕು ಎನ್ನುವುದು ನನ್ನ ಕನಸಾಗಿದೆ. ನಮ್ಮ ತಂದೆ–ತಾಯಿಗೆ ಇಬ್ಬರು ಮಕ್ಕಳು. ತಂದೆ ತೀರಿಕೊಂಡಿದ್ದಾರೆ. ತಾಯಿ ಚಿಕ್ಕ ಹೋಟೆಲ್ ಇಟ್ಟುಕೊಂಡು ಕೆಲಸ ಮಾಡಿ ನನಗೆ ಶಿಕ್ಷಣ ಕೊಡಿಸಿದ್ದಾರೆ. ನನ್ನ ಕುಟುಂಬದಲ್ಲಿ ಪದವಿ ಪಡೆದಿದ್ದು ನಾನು ಒಬ್ಬಳೇ. ನನ್ನ ಬಹುತೇಕ ಶಿಕ್ಷಣ ಗಂಗಾವತಿಯಲ್ಲಿ ಮುಗಿದಿದೆ’ ಎಂದು ಗಾಯತ್ರಿ ತಿಳಿಸಿದರು.
‘ಬಡತನದಲ್ಲಿ ಬೆಳೆದ ನನಗೆ ಆರ್ಥಿಕ ಸಂಕಷ್ಟದ ಅರಿವಿದೆ. ಕುಟುಂಬವನ್ನು ಆರ್ಥಿಕವಾಗಿ ಬಲಪಡಿಸಬೇಕು. ಬಡ ಮಹಿಳೆಯರಿಗೂ ನೆರವಾಗಬೇಕು ಎನ್ನುವುದು ನನ್ನ ಆಶಯ. ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಗುರಿ ಇಟ್ಟುಕೊಂಡಿರುವೆ. ಜೆಆರ್‌ಎಫ್ ಸ್ಕಾಲರ್‌ಶಿಪ್ ಬರುತ್ತಿರುವ ಕಾರಣ ಶಿಕ್ಷಣ ಮುಂದುವರಿಸಲು ಸಾಧ್ಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವೆ’ ಎಂದು ತಿಳಿಸಿದರು.
ರಾಯಚೂರು: ಹವಾಮಾನ ವೈಪರೀತ್ಯದಿಂದಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಯೂ ಆದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.
ರಾಜ್ಯಪಾಲರು ಹಾಗೂ ಕೃಷಿ ಸಚಿವರು ಬೆಳಿಗ್ಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬಳ್ಳಾರಿ ಜಿಲ್ಲೆಯ ತೋರಣಗಲ್‌ನ ಜಿಂದಾಲ್‌ಗೆ ಬಂದರು. ರಾಯಚೂರಿನಲ್ಲಿ ತುಂತುರು ಮಳೆ ಹಾಗೂ ದಟ್ಟ ಮೋಡ ಕವಿದಿದ್ದರಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಹೆಲಿಕಾಪ್ಟರ್ ಇಳಿಸಲು ಅವಕಾಶ ದೊರೆಯಲಿಲ್ಲ. ಮಧ್ಯಾಹ್ನ 12 ವೇಳೆಗೆ ರಾಜ್ಯಪಾಲರು ಹಾಗೂ ಕೃಷಿ ಸಚಿವರು ವರ್ಚುವಲ್ ಮೂಲಕ ಘಟಿಕೋತ್ಸವದಲ್ಲಿ ಪಾಲ್ಗೊಂಡರು. ರಾಜ್ಯಪಾಲರು ರಾಯಚೂರಿಗೆ ಬರುವುದು ರದ್ದಾಗಿರುವುದು ಗೊತ್ತಾದ ನಂತರ ಪೊಲೀಸ್ ಬಂದೋಬಸ್ತ್ ತಿಳಿಗೊಳಿಸಲಾಯಿತು. ಇದರಿಂದ ಕಾರ್ಯಕ್ರಮವೂ ಅಸ್ತವ್ಯಸ್ಥಗೊಂಡಿತು.
ಕೃಷಿ ಸಚಿವರ ಭಾಷಣ ಕೇಳಿಸಲೇ ಇಲ್ಲ. ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ತುಂಬಲು ಇತರ ವಿದ್ಯಾರ್ಥಿಗಳು ಕಿರುಚಾಡಿದರು. ರಾಷ್ಟ್ರಗೀತೆ ಹಾಡುವಾಗ ವಿಶ್ವವಿದ್ಯಾಲಯದ ಡೀನ್ ಒಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತ ನಿಂತಿದ್ದರು. ರಾಜ್ಯಪಾಲರು ಭಾಷಣ ಮಾಡುವಾಗಲೂ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಒಟ್ಟಾರೆ ಘಟಿಕೋತ್ಸವದಲ್ಲಿ ಅಶಿಸ್ತು ಕಂಡು ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.