ADVERTISEMENT

ಮಣ್ಣುಪಾಲಾಗಿ ಉಳಿದ ನಿರಂತರ ನೀರು ಯೋಜನೆ

ನಾಗರಾಜ ಚಿನಗುಂಡಿ
Published 6 ಜುಲೈ 2019, 19:30 IST
Last Updated 6 ಜುಲೈ 2019, 19:30 IST
24 ತಾಸು ನೀರು ಬರುತ್ತದೆ ಎಂದು ಹೇಳಿ ಒಂದು ವರ್ಷದ ಹಿಂದೆಯೇ ಮನೆ ಮುಂದೆ ಪೈಪ್‌ ಹಾಕಿದ್ದಾರೆ. ಇವರೆಗೂ ನೀರು ಬಂದಿಲ್ಲ. ದಿನ ಬಿಟ್ಟು ದಿನಕ್ಕೆ ನಗರಸಭೆಯವರು ನೀರು ಕೊಡುತ್ತಿದ್ದಾರೆ.ನಾಗರಾತ್ನಾ, ರಾಮನಗರ ನಿವಾಸಿ
24 ತಾಸು ನೀರು ಬರುತ್ತದೆ ಎಂದು ಹೇಳಿ ಒಂದು ವರ್ಷದ ಹಿಂದೆಯೇ ಮನೆ ಮುಂದೆ ಪೈಪ್‌ ಹಾಕಿದ್ದಾರೆ. ಇವರೆಗೂ ನೀರು ಬಂದಿಲ್ಲ. ದಿನ ಬಿಟ್ಟು ದಿನಕ್ಕೆ ನಗರಸಭೆಯವರು ನೀರು ಕೊಡುತ್ತಿದ್ದಾರೆ.ನಾಗರಾತ್ನಾ, ರಾಮನಗರ ನಿವಾಸಿ   

ರಾಯಚೂರು: ನಗರದ ಜನರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದ ನಿರಂತರ ನೀರು ಪೂರೈಸುವ ಯೋಜನೆಯ ಪೈಪ್‌ಲೈನ್‌ಗಳು ಮಣ್ಣಿನಲ್ಲಿಯೇ ಹೂತುಕೊಂಡಿದ್ದು, ನಾಲ್ಕು ವರ್ಷ ಕಳೆದರೂ ಅವುಗಳ ಮೂಲಕ ನೀರು ಹರಿಸುವ ಕೆಲಸವಾಗಿಲ್ಲ!

ನೀರಿನ ಪೈಪ್‌ಲೈನ್‌ ಅಳವಡಿಸುವುದಕ್ಕಾಗಿ ನಗರದಾದ್ಯಂತ ರಸ್ತೆ ಅಗೆದು ಹಾಕಿದ್ದು, ಅವುಗಳನ್ನು ಸಮರ್ಪಕವಾಗಿ ಮರುನಿರ್ಮಾಣ ಮಾಡಿಲ್ಲ. ನಿರಂತರ ನೀರು ಯೋಜನೆಯು ಅನುಕೂಲ ಆಗುವ ಬದಲಾಗಿ ವಾಹನಗಳ ಸಂಚಾರವನ್ನು ಸಂಕಷ್ಟಗೊಳಿಸಿದಂತಾಗಿದೆ. ಮನೆಗಳ ಎದುರು ಅಗೆದು ಬಿಟ್ಟ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ಬಿದ್ದಾಗೊಮ್ಮೆ ನೀರು ಸಂಗ್ರಹಗೊಂಡು ಜನ ಸಂಚರಿಸಲು ದುಸ್ತರವಾಗಿದೆ. ಪೈಪ್‌ಲೈನ್‌ ಕಾಮಗಾರಿಯಿಂದಾಗಿ ರಸ್ತೆಯೂ ಇಲ್ಲ, ನೀರು ಕೂಡಾ ಬರಲಿಲ್ಲ ಎನ್ನುವ ಪರಿಸ್ಥಿತಿ ಇದೆ.

ಸಚಿವರು, ಸ್ಥಳೀಯ ರಾಜಕಾರಣಿಗಳು, ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮದವರು ಕಾಲಕಾಲಕ್ಕೆ ಪ್ರಗತಿ ‍ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ಮುಗಿಸುವುದಕ್ಕೆ ನೀಡಿದ ಗಡುವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಹಾಗಿದ್ದರೂ ಇವರೆಗೂ ಶೇ 80 ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಶೇ 20 ರಷ್ಟು ಕಾಮಗಾರಿ ಮುಗಿಸಲು ಒಂದುವರೆ ವರ್ಷದಿಂದ ಸೂಚನೆ ನೀಡಲಾಗುತ್ತಿದೆ. ಆದರೆ, ಅನುಷ್ಠಾನ ಸರಿಯಾಗಿ ನಡೆಯುತ್ತಿಲ್ಲ.

ADVERTISEMENT

2015 ಫೆಬ್ರುವರಿಯಿಂದ 24/7 ನೀರಿನ ಕಾಮಗಾರಿ ಆರಂಭಿಸಲಾಗಿದೆ. ನಿಯಮಾನುಸಾರ 2017 ರ ಆಗಸ್ಟ್‌ನಲ್ಲಿ ಕಾಮಗಾರಿ ಮುಗಿಸಬೇಕಿತ್ತು. ನಾಲ್ಕು ಸಲ ಅವಧಿ ವಿಸ್ತರಿಸಲಾಗಿದೆ. ಅದರೆ, ಕಾಮಗಾರಿ ನಿರ್ದಿಷ್ಟ ಸಮಯಕ್ಕೆ ಮುಗಿಸುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುವುದನ್ನು ನಗರಸಭೆ ಅಧಿಕಾರಿಗಳೆ ಹೇಳುತ್ತಿದ್ದಾರೆ.

₹118 ಕೋಟಿ ಮೊತ್ತದ ಈ ಯೋಜನೆ ಜಾರಿಗಾಗಿ ಏಷಿಯನ್‌ ಡವಲಪಮೆಂಟ್‌ ಬ್ಯಾಂಕ್‌ (ಎಡಿಬಿ) ನೆರವು ಪಡೆಯಲಾಗಿದೆ. ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಯುಐಡಿಎಫ್‌ಸಿ) ಮೂಲಕ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಲು ಅಗತ್ಯ ಮಾನವ ಸಂಪನ್ಮೂಲವನ್ನು ಗುತ್ತಿಗೆದಾರ ಏಜೆನ್ಸಿ ಬಳಸಿಕೊಂಡಿಲ್ಲ. ಬೆರಳೆಣಿಕೆಯಷ್ಟು ಕಾರ್ಮಿಕರಿಂದ ಕಾಮಗಾರಿ ಕೈಗೊಳ್ಳಲಾಗಿದ್ದು, ವಿಳಂಬವಾಗುವುದಕ್ಕೆ ಇದು ಕೂಡಾ ಕಾರಣ ಎನ್ನುವುದು ಅಧಿಕಾರಿಗಳ ವಿವರಣೆ.

ರಾಜಸ್ತಾನದ ಎಸ್‌ಪಿಎಂ ಕಂಪೆನಿಯು 24X7 ನೀರಿನ ಕಾಮಗಾರಿ ಗುತ್ತಿಗೆ ಪಡೆದಿದೆ. ಇಲ್ಲಿಯವರೆಗೂ 27,000 ಮನೆಗಳಿಗೆ ಹೊಸ ನಳ ಸಂಪರ್ಕ ಮಾಡಿದ್ದು, ಸುಮಾರು 10 ಸಾವಿರ ಮನೆಗಳಿಗೆ ಇನ್ನೂ ನಳದ ಸಂಪರ್ಕ ಮಾಡುವುದು ಬಾಕಿ ಇದೆ. ನಗರದಲ್ಲಿ ಮುಖ್ಯ ಹಾಗೂ ಮನೆಗಳ ಸಂಪರ್ಕ ಸೇರಿ ಒಟ್ಟು 527 ಕಿಲೋ ಮೀಟರ್ ಪೈಪ್‌ಲೈನ್‌ ಅಳವಡಿಸಬೇಕಿತ್ತು. ಅದರಲ್ಲಿ ಶೇ 80 ರಷ್ಟು ಮಾತ್ರ ಕೆಲಸ ಪೂರ್ಣವಾಗಿದೆ.

**

ಎರಡು ಬಡಾವಣೆಗಳಿಗೆ ಪ್ರಾಯೋಗಿಕ

ಮಂತ್ರಾಲಯ ರಸ್ತೆಯ ಜ್ಯೋತಿ ಕಾಲೋನಿ ಹಾಗೂ ಬೊಳಮಾನದೊಡ್ಡಿ ಮಾರ್ಗದಲ್ಲಿರುವ ಕೃಷ್ಣದೇವರಾಯ ಕಾಲೋನಿಗಳಿಗೆ ಮೊದಲ ಹಂತ ಪ್ರಾಯೋಗಿಕವಾಗಿ ನಿರಂತರ ನೀರು ಹರಿಸಲು ಗುತ್ತಿಗೆ ಏಜೆನ್ಸಿ ಯೋಜಿಸಿದೆ. ಇದಕ್ಕಾಗಿ ಒಂದು ತಿಂಗಳಿಂದ ತಯಾರಿ ನಡೆಯುತ್ತಿದ್ದು, ನಿರ್ದಿಷ್ಟ ಪ್ರಾಯೋಗಿಕ ನೀರು ಹರಿಸುವುದು ಯಾವಾಗ ಆರಂಭವಾಗುತ್ತದೆ ಎನ್ನುವುದು ಅನಿಶ್ಚಿತ.

ಗುತ್ತಿಗೆ ಏಜೆನ್ಸಿಗೆ ದಂಡ

ನಿರಂತರ ನೀರು ಯೋಜನೆ ಕಾಮಗಾರಿ ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವುದರಿಂದ ಗುತ್ತಿಗೆದಾರ ಏಜೆನ್ಸಿಗೆ ಆರು ತಿಂಗಳಿಗೊಮ್ಮೆ ದಂಡ ವಿಧಿಸಲಾಗಿದೆ. ಇವರೆಗೂ ಸುಮಾರು ₹2 ಕೋಟಿಯಷ್ಟು ದಂಡ ವಸೂಲಿ ಮಾಡಿದ್ದರೂ, ಕಾಮಗಾರಿ ತ್ವರಿತವಾಗಿ ಸಾಗುತ್ತಿಲ್ಲ.

ಮೀಟರ್ ತಗಾದೆ

ಕೆಲವು ಮನೆಗಳ ಮಾಲೀಕರು ನೀರಿನ ನಳಕ್ಕೆ ಮೀಟರ್‌ ಅಳವಡಿಸಲು ಅವಕಾಶ ನೀಡಿಲ್ಲ. ಕಾರ್ಮಿಕರು ಮತ್ತು ನಗರಸಭೆ ಅಧಿಕಾರಿಯೊಂದಿಗೆ ಈ ಬಗ್ಗೆ ತಗಾದೆಗಳಾಗಿವೆ. ಇದರಿಂದಲೂ ಸ್ವಲ್ಪ ವಿಳಂಬವಾಗಿದೆ. ಮೀಟರ್‌ ಅಳವಡಿಸಿಕೊಳ್ಳಲು ನಿರಾಕರಿಸಿದ ಮನೆಗಳನ್ನು ಹೊರತುಪಡಿಸಿ ಬೇರೆ ಮನೆಗಳಿಗೆ ನೀರಿನ ಪೈಪ್‌ಲೈನ್‌ ಅಳವಡಿಕೆಯಾಗಿದೆ. ಇವರೆಗೂ ಶೇ 80 ರಷ್ಟು ಮನೆಗಳಿಗೆ ಹೊಸ ನಳಗಳ ಸಂಪರ್ಕ ಸಾಧ್ಯವಾಗಿದೆ. ಶೇ 20 ರಷ್ಟು ರಷ್ಟು ಮನೆಗಳಿಗೆ ನಳದ ಸಂಪರ್ಕ ಕಲ್ಪಿಸುವ ಕೆಲಸ ಬಾಕಿಬಿದ್ದು ಒಂದುವರೆ ವರ್ಷವಾಗಿದೆ.

ತುಕ್ಕು ಹಿಡಿದ ಮೀಟರ್‌ಗಳು

ಯೋಜನೆ ಆರಂಭದಲ್ಲಿ ನಳಗಳಿಗೆ ಮೀಟರ್‌ ಅಳವಡಿಸಲು ಪ್ರತಿ ಮನೆಗಳಿಂದ ಶುಲ್ಕ ಕಟ್ಟಿಸಿಕೊಳ್ಳಲಾಗುತ್ತಿತ್ತು. ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಮೀಟರ್‌ ಅಳವಡಿಸುವಾಗ ಶುಲ್ಕ ವಸೂಲಿ ಕೈಬಿಡಲಾಗಿದೆ. ಆದರೆ, ಕೆಲವು ಬಡಾವಣೆಗಳಲ್ಲಿ ನಳಗಳ ಸಂಪರ್ಕ ಕಲ್ಪಿಸಲಾಗಿದ್ದು, ಮೀಟರ್ ಅಳವಡಿಸಿಲ್ಲ. ಆನಂತರದಲ್ಲಿ ಮೀಟರ್‌ ಅಳವಡಿಸಲಾಗುವುದು ಎಂದು ಹೇಳಿ ಮೀಟರ್‌ಗಳನ್ನು ಪ್ರತ್ಯೇಕಿಸಿ ಕೊಡಲಾಗಿದೆ. ವರ್ಷಗಳಿಂದ ಮೂಲೆಗೆ ಬಿದ್ದಿರುವ ಮೀಟರ್‌ಗಳು ತುಕ್ಕು ಹಿಡಿಯಲಾರಂಭಿಸಿವೆ.

ಕಳ್ಳರ ಕೈಚಳಕ

ಇಂದಿರಾನಗರ, ರಾಮನಗರ ಸೇರಿದಂತೆ ಕೆಲವು ಕೊಳೆಗೇರಿ ಪ್ರದೇಶಗಳ ಮನೆಗಳ ಎದುರು ಅಳವಡಿಸಿದ್ದ ನೀರಿನ ಮೀಟರ್‌ಗಳು ಆರಂಭದಲ್ಲಿ ಕಳ್ಳತನವಾಗಿವೆ. ಕೂಡಲೇ ಎಚ್ಚೆತ್ತುಕೊಂಡ ಜನರು ಮೀಟರ್‌ಗಳನ್ನು ತೆಗೆದು ಮನೆಯಲ್ಲಿಟ್ಟುಕೊಂಡಿದ್ದಾರೆ. ಕೆಲವು ಕಡೆ ಮೀಟರ್‌ಗಳನ್ನು ಸುಭದ್ರವಾಗಿ ಅಳವಡಿಸಿ ಲಾಕರ್‌ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.