ADVERTISEMENT

31ಕ್ಕೆ ನೀರು ಸ್ಥಗಿತ; ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 8:40 IST
Last Updated 24 ಮಾರ್ಚ್ 2011, 8:40 IST
31ಕ್ಕೆ ನೀರು ಸ್ಥಗಿತ; ರೈತರಲ್ಲಿ ಆತಂಕ
31ಕ್ಕೆ ನೀರು ಸ್ಥಗಿತ; ರೈತರಲ್ಲಿ ಆತಂಕ   

ಲಿಂಗಸುಗೂರ: ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪುರ ಅಣೆಕಟ್ಟೆ ವ್ಯಾಪ್ತಿಯ ನಾರಾಯಣಪುರ ಬಲ ದಂಡೆ, ಎಡದಂಡೆ ಹಾಗೂ ಏತ ನೀರಾವರಿ ಯೋಜನೆಗಳಿಂದ ಇದೆ ಮಾರ್ಚ್ 31ರವರೆಗೆ ಮಾತ್ರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ನಿರ್ಣಯ ಕೈಗೊಂಡಿದೆ. ಹೀಗಾಗಿ ಬೇಸಿಗೆ ಬೆಳೆ ತಡವಾಗಿ ನಾಟಿ ಮಾಡಿಕೊಂಡಿರುವ ಅಚ್ಚುಕಟ್ಟು ಪ್ರದೇಶದ ರೈತ ಸಮೂಹದಲ್ಲಿ ಆತಂಕ ಮನೆಮಾಡಿಕೊಂಡಿದೆ.

ನಾರಾಯಣಪುರ ಅಣೆಕಟ್ಟೆ ವ್ಯಾಪ್ತಿಯಡಿ ಲಕ್ಷಾಂತರ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿವರ್ಷ ಅಣೆಕಟ್ಟೆ ವಿಭಾಗದ ಅಧಿ ಕಾರಿಗಳು ಏಪ್ರಿಲ್-20ರ ವರೆಗೆ ನೀರು ಹರಿಸುತ್ತ ಬಂದಿದ್ದಾರೆ. ಪ್ರಸಕ್ತ ವರ್ಷ ಮಾರ್ಚ 31ಕ್ಕೆ ನೀರು ಸ್ಥಗಿತ ಗೊಳಿಸುವ ನಿರ್ಧಾರ ಪ್ರಕಟಿಸಿರು ವುದು ಬೇಸಿಗೆ ಬೆಳೆ ನಾಟಿ ಮಾಡಿ ಕೊಂಡಿರುವ ರೈತರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ಬೇಸಿಗೆ ಬೆಳೆ ತಡವಾಗಿ ನಾಟಿ ಮಾಡಿಕೊಂಡಿ ್ದದರಿಂದ ಏಪ್ರಿಲ್ ಕೊನೆವರೆಗೆ ನೀರು ಹರಿಸುವಂತೆ ರೈತರು ಆಗ್ರಹಪಡಿಸಿದ್ದಾರೆ.

ಸದ್ಯದಲ್ಲಿ ನಾಟಿ ಮಾಡಿಕೊಂಡಿರುವ ಭತ್ತದ ಬೆಳೆ ರೈತರ ಕೈಗೆ ಸೇರಲು ಇನ್ನೂ ಎರಡು ತಿಂಗಳು ಬೇಕಾಗುತ್ತದೆ. ಕನಿಷ್ಠ ಪಕ್ಷ ಮುಂದಿನ ದಿನಗಳಲ್ಲಿ 40 ದಿನ ನೀರು ಕೊಡಲೆಬೇಕು. ಇಲ್ಲವಾದರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು, ಅಣೆಕಟ್ಟೆ ವಿಭಾಗದ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕುವ ರೈತರ ನೆರವಿಗೆ ಮುಂದಾಗುವಂತೆ ಸಂಜೀವಪ್ಪ, ಗಂಗಪ್ಪ, ಮಲ್ಲಿಕಾರ್ಜು ಒತ್ತಾಯಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಅಣೆಕಟ್ಟೆ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರನ್ನು ಸಂಪರ್ಕಿಸಿದಾಗ ನೀರಾವರಿ ಸಲಹಾ ಸಮಿತಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಈ ನಿರ್ಧಾರದಲ್ಲಿ ಬದಲಾವಣೆ ಪ್ರಶ್ನೆಯೆ ಇಲ್ಲ. ಮೇಲ್ಭಾಗದ ಅಣೆಕಟ್ಟೆಗಳಿಂದ ಹೆಚ್ಚುವರಿ ನೀರು ಬಂದಲ್ಲಿ, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಬ ಹುದಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ನಡೆದು ಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.