ADVERTISEMENT

‘ಒತ್ತುವರಿ ಪ್ರಕರಣ ಇತ್ಯರ್ಥಕ್ಕೆ ವಿಶೇಷ ಕಾಳಜಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 5:56 IST
Last Updated 7 ಜನವರಿ 2018, 5:56 IST

ರಾಯಚೂರು: ಸರ್ಕಾರಿ ಜಮೀನು ಹಾಗೂ ಕೆರೆಗಳ ರಕ್ಷಣೆ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದ್ದು, ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಇಂದ್ರೇಶ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕಲಬುರ್ಗಿ ವಿಭಾಗದ ಸರ್ಕಾರಿ ಜಮೀನುಗಳ ನ್ಯಾಯಾಲಯ ಪ್ರಕರಣಗಳ ಮತ್ತು ಸರ್ಕಾರಿ ಜಮೀನು ಒತ್ತುವರಿ ತೆರವು ಕುರಿತ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸರ್ಕಾರಿ ಜಮೀನು ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸುವ ಸಲುವಾಗಿ ಸಿವಿಲ್ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು ಎಂದು ಸೂಚಿಸಿದರು.

ADVERTISEMENT

ಸರ್ಕಾರಿ ಜಮೀನುಗಳ ಒತ್ತವರಿ ತೆರವುಗೊಳಿಸುವಲ್ಲಿ ಅಧಿಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸರಿಯಾದ ಮಾಹಿತಿಗಳು ಹಾಗೂ ದಾಖಲೆಗಳು ಒದಗಿಸುವಲ್ಲಿ ಕೂಡ ಅಧಿಕಾರಿಗಳು ಎಡವುತ್ತಿದ್ದಾರೆ ಎಂದರು.

ಇದೇ ತಿಂಗಳು 17ರಂದು ನಿಗಮದ ಕಚೇರಿಯಲ್ಲಿ ನಡೆಯುವ ಸಭೆಗೆ ಸಮರ್ಪಕವಾದ ಮಾಹಿತಿಯೊಂದಿಗೆ ಅಧಿಕಾರಿಗಳು ಬರಬೇಕು. ಇಂತಹ ಪ್ರಕರಣಗಳನ್ನು ವಿಳಂಬ ಮಾಡಲು ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.

ಸರ್ಕಾರಿ ವಕೀಲರಿಗೆ ಸರಿಯಾಗಿ ಮಾಹಿತಿ ಒದಗಿಸಿ, ಪ್ರಕರಣಗಳನ್ನು ನಿಭಾಯಿಸಬೇಕು. ಕೆರೆಗಳ ಮಾಹಿತಿಯನ್ನು ಸಂಗ್ರಹಿಸಿ, ಒತ್ತುವರಿಯಾಗಿರುವುದನ್ನು ಗುರುತಿಸಿ ಕ್ರಮ ವಹಿಸಬೇಕು ಎಂದರು. ನಿಗಮದ ಅಧಿಕಾರಿ ನಾಗರಾಜ ಹಾಗೂ ಕಲಬುರ್ಗಿ ವಿಭಾಗದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.