ADVERTISEMENT

ಮೂರು ತಿಂಗಳಲ್ಲೇ ಹದಗೆಟ್ಟ ರಸ್ತೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 7:11 IST
Last Updated 29 ಜನವರಿ 2018, 7:11 IST
ಸಿಂಧನೂರಿನ ಹಟ್ಟಿ ರಸ್ತೆಯಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದ್ದ ಡಾಂಬರೀಕರಣ ಕಿತ್ತು ಹೋಗಿರುವ ಹಿನ್ನೆಲೆಯಲ್ಲಿ ಪುನಃ ದುರಸ್ತಿ ಕಾಮಗಾರಿ ನಡೆದಿರುವುದು
ಸಿಂಧನೂರಿನ ಹಟ್ಟಿ ರಸ್ತೆಯಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದ್ದ ಡಾಂಬರೀಕರಣ ಕಿತ್ತು ಹೋಗಿರುವ ಹಿನ್ನೆಲೆಯಲ್ಲಿ ಪುನಃ ದುರಸ್ತಿ ಕಾಮಗಾರಿ ನಡೆದಿರುವುದು   

ಸಿಂಧನೂರು: ಮೂರು ತಿಂಗಳ ಹಿಂದೆ ನಗರೋತ್ಥಾನ ಯೋಜನೆಯಡಿ ಡಾಂಬರೀಕರಣಗೊಂಡ ನಗರ ವ್ಯಾಪ್ತಿಯ ಹಟ್ಟಿ ರಸ್ತೆ ಹದಗೆಟ್ಟಿದೆ. ಇದರ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಆರಂಭವಾಗಿದೆ.

ಸಿಂಧನೂರು-–ತಾವರಗೇರಾ ಮುಖ್ಯರಸ್ತೆಗೆ ಕೂಡುವ ಸುಮಾರು 1 ಕಿ.ಮೀ. ದೂರದ ಎಡದಂಡೆ ನಾಲೆಯ 40ನೇ ಉಪಕಾಲುವೆವರೆಗೆ ರಸ್ತೆ ಸುಧಾರಣೆ ಮಾಡಲಾಗಿತ್ತು. ಈಗ ಕೆಲ ಕಡೆಗಳಲ್ಲಿ ರಸ್ತೆ ಮಧ್ಯೆಯೇ ಬಿರುಕು ಬಿಟ್ಟು ಡಾಂಬರ್ ಕಿತ್ತು ಹೋಗಿದೆ. ಇದರಿಂದ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ರಸ್ತೆ ನಿರ್ಮಿಸುವ ಸಮಯದಲ್ಲಿ ಅಂದಾಜು ಪತ್ರಿಕೆಯಂತೆ ಕಂಕರ್ ಹಾಕುತ್ತಿಲ್ಲ, ನಿಗದಿತ ಪ್ರಮಾಣದಲ್ಲಿ ರಸ್ತೆಯನ್ನು ಅಗೆಯುತ್ತಿಲ್ಲ ಮತ್ತು ಸರಿಯಾಗಿ ಡಾಂಬರ್ ಹಾಕಿಲ್ಲವೆಂದು ನಗರಾಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಮತ್ತು ಲಿಂಗಸುಗೂರು ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದರು.

ಇದರ ಹಿನ್ನೆಲೆಯಲ್ಲಿ ರಸ್ತೆ ಗುಣಮುಟ್ಟಕ್ಕೆ ಸಂಬಂಧಿಸಿದಂತೆ ಮೂರನೇ ಸಂಸ್ಥೆಯಿಂದ ತನಿಖೆ ಮಾಡಿಸಲಾಗಿತ್ತು. ರಸ್ತೆ ಗುಣಮಟ್ಟ ಸಮರ್ಪಕವಾಗಿದೆ ಎಂದು ಪ್ರಮಾಣ ಪತ್ರ ನೀಡಲಾಗಿತ್ತು. ಅಲ್ಲದೆ ನಗರಸಭೆಯ ಪೌರಾಯುಕ್ತರು ಮತ್ತು ಎಂಜನಿಯರ್‌ಗಳು ಕಾಮಗಾರಿ ರಸ್ತೆ ಗುತ್ತಿಗೆ ಪಡೆದ ಸಂಸ್ಥೆಗೆ ಬಿಲ್ ಪಾವತಿ ಮಾಡಲು ಶಿಫಾರಸು ಮಾಡಿದ್ದರಿಂದ ಗುತ್ತಿಗೆದಾರರಿಗೆ ಹಣವೂ ಸಹ ಪಾವತಿಯಾಗಿದೆ. ಆದರೆ ಮೂರು ತಿಂಗಳೊಳಗೆ ರಸ್ತೆಯ ಡಾಂಬರೀಕರಣ ಕಿತ್ತಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ನಗರಾಭಿವೃದ್ಧಿ ಸಮಿತಿಯ ಪ್ರಧಾನ ಸಂಚಾಲಕ ವೀರಭದ್ರಪ್ಪ ಕುರಕುಂದಿ, ಎಐಟಿಯುಸಿ ಮುಖಂಡ ವೆಂಕನಗೌಡ ಗದ್ರಟಗಿ, ಬಣಜಿಗ ಸಮಾಜದ ಅಧ್ಯಕ್ಷ ಗುಂಡಪ್ಪ ಬಳಿಗಾರ ಆರೋಪಿಸಿದ್ದಾರೆ.

ADVERTISEMENT

‘ಒಳಚರಂಡಿ ಯೋಜನೆಯ ಮ್ಯಾನ್‌ಹೋಲ್ ಮತ್ತು ರಿಸಿವಿಂಗ್ ಚೇಂಬರ್‌ನಲ್ಲಿ ನಿರಂತರ ನೀರು ಹರಿಯುತ್ತಿರುವುದರಿಂದ ರಸ್ತೆ ಹದಗೆಟ್ಟಿದೆ. ಅಂತಿಮ ಬಿಲ್ ಪಾವತಿಯಾದ ನಂತರ ಎರಡು ವರ್ಷದವರೆಗೆ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರರಿಗೆ ಸೇರಿದ್ದು. ಬಿರುಕುಬಿಟ್ಟ ರಸ್ತೆಯ ಡಾಂಬರು ಕಿತ್ತು ಹೊಸದಾಗಿ ಕಂಕರ್ ಮತ್ತು ಡಾಂಬರ್ ಹಾಕಲು ತಿಳಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ನಡೆದಿದೆ ಎಂದು ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜನಿಯರ್ ಶಾಮಲಾ ತಿಳಿಸಿದರು.

ನಗರೋತ್ಥಾನ ಯೋಜನೆಯಡಿ ನಿರ್ಮಿಸಲಾದ ಯಾವುದೇ ರಸ್ತೆಯಲ್ಲಿ ಲೋಪದೋಷ ಕಂಡು ಬರಲಿ, ಅಂತಹ ರಸ್ತೆಗಳು ದುರಸ್ತಿಗೆ ಸೂಚಿಸಲಾಗುವುದು. ಇದರ ಹಿನ್ನೆಲೆಯಲ್ಲಿ ಇಲ್ಲಿ ಕಾಮಗಾರಿ ನಡೆದಿದೆ ಎಂದು ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.