ADVERTISEMENT

ಕಾನೂನು ಬಾಹಿರ ಚಟುವಟಿಕೆ ಮಟ್ಟಹಾಕಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 7:03 IST
Last Updated 30 ಜನವರಿ 2018, 7:03 IST

ರಾಯಚೂರು: ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟಹಾಕಬೇಕು. ರೌಡಿ ಶೀಟ್‌ಗಳ ಸಂಪೂರ್ಣ ಮಾಹಿತಿ ಕಲೆಹಾಕುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಈಶಾನ್ಯ ವಲಯದ ಬಳ್ಳಾರಿ ವಿಭಾಗದ ಪೊಲೀಸ್‌ ಮಹಾನಿರ್ದೇಶಕ (ಐಜಿಪಿ) ಎನ್‌.ಶಿವಪ್ರಸಾದ್‌ ಹೇಳಿದರು. ಜಿಲ್ಲಾ ಪೊಲೀಸ್‌ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪೊಲೀಸ್‌ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಚುನಾವಣೆ ನಡೆಯುವ ಮೂರು ತಿಂಗಳು ಪೂರ್ವದಲ್ಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ವಹಿಸಬೇಕಾಗುತ್ತದೆ. ಬಳ್ಳಾರಿ ವಲಯದ ಮೂರು ಜಿಲ್ಲೆಗಳ ಪೊಲೀಸ್‌ ಠಾಣೆ ವ್ಯಾಪ್ತಿಯ ರೌಡಿಗಳನ್ನು ಕರೆಯಿಸಿ ಪರೇಡ್‌ ಮಾಡಿಸಿದ್ದಾರೆ. ಒಳ್ಳೆಯ ವ್ಯಕ್ತಿಯಾಗಿ ಬದುಕುತ್ತಾರೆ ಎನ್ನುವವರನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಪಟ್ಟಿಯಲ್ಲಿ ಹೆಸರಿದೆ ಎನ್ನುವ ಕಾರಣಕ್ಕೆ ಹಾಗೆಯೇ ಮುಂದುವರಿಸಬಾರದು. ವ್ಯಕ್ತಿಗಳ ಹಿನ್ನೆಲೆ ಹಾಗೂ ಅಪರಾಧದ ಮಾಹಿತಿ ಕಲೆಹಾಕಿದರೆ ಮಾತ್ರ ವ್ಯಕ್ತಿಯ ಮಾಹಿತಿ ಅರ್ಥವಾಗುತ್ತದೆ’ ಎಂದು ತಿಳಿಸಿದರು.

‘ಘೋರ ಅಪರಾಧ ಕೃತ್ಯದಲ್ಲಿ ಭಾಗಿಯಾದವರನ್ನು ಗಡೀಪಾರು ಮಾಡಲು ತಿಳಿಸಲಾಗಿದೆ. ಸಾರ್ವಜನಿಕವಾಗಿ ಬಂದೂಕು, ತಲ್ವಾರ್‌ ಸೇರಿದಂತೆ ಮಾರಕಾಸ್ತ್ರ ಹಿಡಿದುಕೊಂಡು ಅಡ್ಡಾಡುವವರನ್ನು ಹಾಗೂ ಕಾನೂನು ಬಾಹಿರ ಹಣ ವಸೂಲಿ ಮಾಡುವವರನ್ನು ಗಡೀಪಾರು ಮಾಡಲಾಗುವುದು. ಅಗತ್ಯಬಿದ್ದರೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ರಾಯಚೂರು ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿ ಇರುವುದರಿಂದ ಅಪಘಾತ ಘಟನೆಗಳು ನಡೆಯುತ್ತಿವೆ. ಮನೆ ಕಳ್ಳತನ ಹಾಗೂ ಸರಗಳ್ಳತನ ನಡೆದಿರುವ ಪ್ರಕರಣಗಳು ದಾಖಲಾಗಿವೆ. ಮನೆಬೀಗ ಹಾಕಿಕೊಂಡು ಹೋಗುವವರ ಮನೆಗಳಲ್ಲಿ ಕಳ್ಳತನ ಘಟನೆಗಳು ಹೆಚ್ಚಾಗಿವೆ. ಪೊಲೀಸರು ಕಳ್ಳರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

‘ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದ ರೀತಿಯಲ್ಲಿ ಮೇಲಿಂದ ಮೇಲೆ ಕಾಣಿಸಿಕೊಂಡರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ಕೊಡುವವರಿಗೆ ಪೊಲೀಸರು ಯಾವ ತೊಂದರೆ ಕೊಡುವುದಿಲ್ಲ. ಕಾನೂನು ಗೌರವಿಸುವವರನ್ನು ಕಾನೂನು ಗೌರವಿಸುತ್ತದೆ. ಇದನ್ನು ಅರ್ಥ ಮಾಡಿಕೊಂಡು ಜನರು ಪೊಲೀಸರೊಂದಿಗೆ ಸಹಕರಿಸಬೇಕು’ ಎಂದು ಹೇಳಿದರು.

’ವಿಜ್ಞಾನ–ತಂತ್ರಜ್ಞಾನ ಅಭಿವೃದ್ಧಿಯಾಗಿ ಹೊಸ ಹೊಸ ಪರಿಕರಗಳನ್ನು ಜನರು ಬಳಸುತ್ತಿದ್ದಾರೆ. ಸಂಪರ್ಕ ವ್ಯಾಪ್ತಿ ತುಂಬಾ ವಿಶಾಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಅಪರಾಧ ಮಟ್ಟಹಾಕಲು ಪ್ರತಿದಿನವೂ ಜ್ಞಾನ ವಿಸ್ತರಿಸಿಕೊಳ್ಳುವುದು ಅನಿವಾರ್ಯ’ ಎಂದರು.

‘ಪೊಲೀಸರು ವೃತ್ತಿಪರತೆ ಬೆಳೆಸಿಕೊಳ್ಳಬೇಕಾಗಿದೆ. ಸಾಮಾನ್ಯ ಜನರಂತೆ ಪೊಲೀಸರು ಬದುಕು ನಡೆಸುವುದು ಸಾಧ್ಯವಿಲ್ಲ. ಸಮಾಜದ ರಕ್ಷಣೆಯನ್ನು ಸೇವೆಯಂತೆ ಮಾಡಬೇಕಾಗುತ್ತದೆ ಎಂಬುದನ್ನು ಮೊದಲೆ ತಿಳಿದುಕೊಂಡು ಈ ಇಲಾಖೆಗೆ ಬಂದಿರುತ್ತಾರೆ. ಕರ್ತವ್ಯ ಪ್ರಜ್ಞೆಯ ಜಾಗೃತಿ ಹಾಗೂ ನೈತಿಕ ಸ್ಥೈರ್ಯ ತುಂಬುವುದಕ್ಕಾಗಿ ಪ್ರತಿ ಸೋಮವಾರ ಮತ್ತು ಶುಕ್ರವಾರ ಪೊಲೀಸರೆಲ್ಲ ಕವಾಯತು’ ಮಾಡುತ್ತಾರೆ ಎಂದರು.

* * 

ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗುವವರು ಠಾಣೆಗೆ ಮಾಹಿತಿ ಕೊಡಬೇಕು. ಈ ಬಗ್ಗೆ ರಾಯಚೂರಿನ ನಿಜಲಿಂಗಪ್ಪ ಕಾಲೊನಿ, ಡ್ಯಾಡಿ ಕಾಲೊನಿಯಲ್ಲಿ ಜನಜಾಗೃತಿ ಮೂಡಿಸಲಾಗಿದೆ.
ಕಿಶೋರಬಾಬು
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.