ADVERTISEMENT

ಶಾಸಕ ಅನ್ಸಾರಿ ಹೇಳಿಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 4:44 IST
Last Updated 3 ಫೆಬ್ರುವರಿ 2018, 4:44 IST

ಲಿಂಗಸುಗೂರು: ‘ಸಂವಿಧಾನದ ಆಶಯಕ್ಕೆ ಧಕ್ಕೆ ಮಾಡುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಿದ ಶಾಸಕ ಎಕ್ಬಾಲ್‌ ಅನ್ಸಾರಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಜೊತೆಗೆ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡಿದ್ದು ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು’ ಎಂದು ಹಿಂದೂ ಜಾಗರಣಾ ವೇದಿಕೆ ಶುಕ್ರವಾರ ಮನವಿ ಸಲ್ಲಿಸಿತು.

‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕರು ತಮ್ಮ ಸ್ಥಾನದ ಘನತೆ ಗೌರವ ಮರೆತು ಸಂವಿಧಾನದ ಆಶಯಕ್ಕೆ ಭಂಗ ತಂದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡುವ ಪೊಲೀಸ್‌ ಅಧಿಕಾರಿಗಳು ನಂಬಿಕೆಗೆ ಅರ್ಹರಲ್ಲ ಎಂದು ಬಹಿರಂಗ ವೇದಿಕೆಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಶಾಸಕರ ಬಳಿ ಹೋಗುವ ಯುವಕರಿಗೆ ಕುರಿ ಕಳ್ಳತನ ಮಾಡಿ ತಿನ್ನಬೇಕು ಎಂದು ಪ್ರಚೋದನೆ ಮಾಡುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಸಮಾಜ ವಿರೋಧಿ ಕೃತ್ಯಗಳಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುತ್ತಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ನ್ಯಾಯ ಕೇಳುವ ಹಿಂದೂ–ಮುಸ್ಲಿಂ ಯುವಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಕ್ರಿಮಿನಲ್‌ಮೊಕದ್ದಮೆ ದಾಖಲಿಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ಚುರುಕುಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಹುಲಗೇಶ ನಾಯಕ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿ ಪಾರ್ವತಿ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಪಾಂಡುರಂಗ ಆಪ್ಟೆ ಸಿದ್ದು ಬಡಿಗೇರ, ವಿಶ್ವನಾಥ ಆನ್ವರಿ, ಲಕ್ಷ್ಮಣ ನಾಯಕ, ನರೇಶರೆಡ್ಡಿ, ರಾಜೂ ಠಾಕೂರು, ನಲ್ಲಾರೆಡ್ಡಿ, ವಿಜಯ ಮಡಿವಾಳ, ಬಾಬು ನಾಯಕ, ಹರ್ಷಾ ಆಲ್ಕೋರ್‌, ಯಮನೂರ, ಪರಶುರಾಮ, ಶರಣು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.