ADVERTISEMENT

ಉದ್ಯೋಗ ಸೃಷ್ಟಿಯಲ್ಲಿ ಸೋತ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 7:15 IST
Last Updated 10 ಫೆಬ್ರುವರಿ 2018, 7:15 IST

ರಾಯಚೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಕೋಡ ಮಾರುವುದು ಕೂಡ ಉದ್ಯೋಗ ಎನ್ನುವ ಮೂಲಕ ಉದ್ಯೋಗ ಸೃಷ್ಟಿ ಭರವಸೆ ಈಡೇರಿಸುವಲ್ಲಿ ಸೋತಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಶಿವಸುಂದರ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದನ್ನಿ ರಂಗಮಂದಿರದಲ್ಲಿ ಜನಾಂದೋಲನಗಳ ಮಹಾಮೈತ್ರಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತ ಮತದಾರರ ಸಮಾವೇಶದಲ್ಲಿ ಮಾತನಾಡಿದರು.

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಹಲವು ಭರವಸೆಗಳನ್ನು ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂವಿಧಾನದ ಆಶಯಗಳನ್ನು ಜಾರಿಗೊಳಿಸದೆ ಪಕೋಡ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

ಕೃಷಿ ಕ್ಷೇತ್ರದಲ್ಲಿ ಸಂಕಷ್ಟಗಳನ್ನು ನಿವಾರಿಸಲು ಪ್ರಧಾನಮಂತ್ರಿ ಅವರಿಂದ ಸಾಧ್ಯವಾಗಿಲ್ಲ. ಕೃಷಿಕರು ಕೃಷಿ ರಂಗದಿಂದ ವಿಮುಖರಾಗುವಂತೆ ಆಗಿದೆ. ಕಾರ್ಮಿಕ ಹಾಗೂ ಬಡ ವರ್ಗದವರು ಕೂಡ ಕಷ್ಟದಿಂದ ಜೀವನ ನಡೆಸುವಂತಾಗಿದೆ. ಸರ್ಕಾರ ಶ್ರೀಮಂತರ ಜೇಬು ತುಂಬಿಸುವ ಕೆಲಸಕ್ಕೆ ಸೀಮಿತವಾಗಿದೆ ಎಂದರು.

ಟಿಯುಸಿಐ ರಾಜ್ಯ ಘಟಕ ಅಧ್ಯಕ್ಷ ಆರ್.ಮಾನಸಯ್ಯ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಉದ್ದೇಶ ಒಂದೇ ಆಗಿದ್ದು, ರೈತರ ಹಾಗೂ ಬಡವರನ್ನು ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿದರು.

ದೇಶ ಸ್ವಾತಂತ್ರ್ಯಗೊಂಡು 70 ವರ್ಷಗಳು ಗತಿಸಿದರೂ ಕೂಡ ಕನಿಷ್ಠ ಕೂಲಿ ಒದಗಿಸಲು ಹಾಗೂ ನಿರುದ್ಯೋಗ ದೂರ ಮಾಡಲು ಈ ರಾಜಕೀಯ ಪಕ್ಷಗಳಿಂದ ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವದ ವಿರುದ್ಧವಾಗಿ ಆಡಳಿತ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಾಂದೋಲನ ಮಹಾಮೈತ್ರಿಯ ಸಂಚಾಲಕ ರಾಘವೇಂದ್ರ ಕುಷ್ಟಗಿ ಪ್ರಾಸ್ತಾವಿಕ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಹಾಮೈತ್ರಿಯಿಂದ 20 ಶಾಸಕರನ್ನು ಗೆಲ್ಲಿಸಿಕೊಂಡು, ರಾಜ್ಯದ ಶೋಷಿತರ, ದಮನಿತರ, ಮಹಿಳೆಯರ ಹಾಗೂ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು. ಸಿಪಿಎಂನ ಬಿ.ರುದ್ರಯ್ಯ, ಚಾಮರಸ ಮಾಲಿಪಾಟೀಲ, ಡಾ.ವಿ.ಎ.ಮಾಲಿಪಾಟೀಲ, ಲಕ್ಷ್ಮಣಗೌಡ ಕಡಗಂದೊಡ್ಡಿ, ಜೆ.ಬಿ.ರಾಜು, ಜಾನ್‌ವೆಸ್ಲಿ, ಮೋಕ್ಷಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.